ವಿಭಾಗಗಳು

Sunday, March 1, 2015

ಶ್ರೀ ಪುರಂದರ ನಮನ ಮತ್ತು ಓಂಕಾರ ಸಮಿತಿ

"ಓಂಕಾರ ಸಮಿತಿ ವೃಂದಕ್ಕೆ ಕೋಟಿ ನಮನ"

ನಮಸ್ಕಾರ ನಮ್ಮ ಹೆಮ್ಮೆಯ ಓಂಕಾರ ಸಮಿತಿಯ ವೃಂದಕ್ಕೆ

|| ಶ್ರೀ ಪುರಂದರ ನಮನ|| ಎಂಬ ಈ ಹೊಸ ಸಂಗೀತ ಕಾರ್ಯಕ್ರಮವನ್ನು ಆಯೊಜಿಸಿ ನಮ್ಮ ಇಲ್ಲಿಯ ಅಂದರೆ ಸ್ಥಳೀಯ ಓಮಾನ್ ಕನ್ನಡಿಗರಲ್ಲಿ ಇರುವ ಸಂಗೀತ ಕಲಾ ಪ್ರತಿಭೆಗಳನ್ನು ಒಟ್ಟುಗೂಡಿಸಿ ಈ ಒಂದು ಸುಂದರ ವೇದಿಕೆಯನ್ನು ಒದಗಿಸಿ ಶ್ರೀ ಪುರಂದರದಾಸರು ರಚಿಸಿದ ಅದ್ಭುತ ದೇವರ ನಾಮವನ್ನು ಹಾಡಿಸಿ ನಮ್ಮೆಲ್ಲರನ್ನು ಹಾಗೂ ಕಾರ್ಯಕ್ರಮಕ್ಕೆ ಬಂದು ನಿಶ್ಯಬ್ದವಾಗಿ, ಭಕ್ತಿಯಿಂದ ಆಲಿಸಿದ ಎಲ್ಲ ಭಕ್ತರಾದಂತಹ ಪ್ರೇಕ್ಷಕರ ಜೀವನ ಪಾವನವಾಗುವಂತೆ ಮಾಡಿದ ನಮ್ಮ ಓಂಕಾರ ಸಮಿತಿ ವೃಂದಕ್ಕೆ ನನ್ನ ಕೋಟಿ ನಮನ. 

|| ಶ್ರೀ ಪುರಂದರ ನಮನ||, ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಿರಿಯ ಹಾಗೂ ಹಿರಿಯ ಕಲಾವಿದರು ಸಹ ತಮ್ಮ ಹಾಡಿನ ಮೂಲಕ ಶ್ರೀ ಪುರಂದರದಾಸರಿಗೆ ನಮನ ಸಲ್ಲಿಸಿದ್ದಾರೆ ಎಂದರೆ ತಪ್ಪಾಗಲಾರದು. ಗಾಯಕರು ಆಯಿದು ಎಲ್ಲ ದಾಸರ ಕೀರ್ತನೆಗಳು ಅತಿ ಅದ್ಭುತವಾಗಿದ್ದು ಮತ್ತು ಭಕ್ತಿ ಭಾವದಿಂದ ಹಾಡಿ ಆ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಹಾಗೆ ಅಷ್ಟೇ ಭಕ್ತಿ-ಭಾವದಿಂದ ಆಲಿಸಿದ ಎಲ್ಲ ಪ್ರೇಕ್ಶಕ ವೃಂದವು ಸಹ ಆ ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದರೆ ತಪ್ಪಗಲಾರದು. 

ಸಂಗೀತ ಕಾರ್ಯಕ್ರಮಕ್ಕೆ ಇನ್ನು ಮೆರಗು ತಂದು ಕೊಟ್ಟಂತಹ ನಮ್ಮ ಪಕ್ಕವಾದ್ಯ ಸಹಾಯಕರಾದಂತಹ ಮೃದಂಗ ವಿದ್ವಾನ್ - ಶ್ರೀ ಸುಂದರೇಶನ್ ಮತ್ತು ಕು. ಸಂತೃಪ್ತ, ಹಾರ್ಮೊನಿಯಮ್ ಪ್ರವೀಣ - ಶ್ರೀ ಕರುಣಾಕರ್ ರಾವ್ ಮತ್ತು ಶ್ರೀ ಸುರೇಂದ್ರ ಆಚಾರ್ಯ, ತಬಲಾ ಪ್ರವೀಣ - ಶ್ರೀ ಗಿರೀಶ್ ನಾಯಕ್ ಮತ್ತು ಶ್ರೀ ನವೀನ್ ಆಚಾರ್ಯ, ವಯೊಲಿನ್ ನುಡಿಸಿದಂತಹ ಕಿರಿಯ ಕಲವಿದರಾದಂತಹ ಕು. ಪ್ರೀತಿ ಕೋಡಂಚ ಮತ್ತು ಕು. ಅರುಣ್ ಕುಮಾರ್ ಮತ್ತು ಸಂಗೀತ ಕಲಾವಿದರನ್ನು ಹುರಿದುಂಬಿಸಿ ಹಾಗೂ ಶ್ರೀ ಪುರಂದರದಾಸರ ಹಿರಿಮೆಯನ್ನ, ಅವರ ಚರಿತ್ರೆಯನ್ನ ಮತ್ತು ಅವರು ಸಂಗೀತ ಕ್ಷೇತ್ರಕ್ಕೆ ಕೊಟ್ಟಂತಹ ಕೊಡುಗೆಯನ್ನು ನಮಗೆಲ್ಲ ಅಚ್ಚುಕಟ್ಟಾಗಿ ಉಣಬಡಿಸಿದ ನಮ್ಮ ಶ್ರೀಮತಿ ಕವಿತಾ ರಾಮಕೃಷ್ಣರವರು - ಒಟ್ಟಿಗೆ ಎಲ್ಲರು ಸಹ || ಶ್ರೀ ಪುರಂದರ ನಮನ|| ಸಂಗೀತ ಕಾರ್ಯಕ್ರಮ ಸುಂದರ ಮತ್ತು ಭಕ್ಥಿ ಭಾವದಿಂದ ಮೂಡಿ ಬರಲು ಮನಃಪೂರಕವಾಗಿ ಸಹಕರಿಸಿದ್ದಾರೆ. ಅವರು ಸಹ ಆ ದೇವರ ಕೃಪೆಗೆ ಪಾತ್ರರಾಗಿದ್ದರೆ ಮತ್ತು ಅವರಿಗೂ ನಮ್ಮೆಲ್ಲರ ಹೃತ್ಪೂರ್ವಕ ವಂದನೆಗಳು.

ಈ ಒಂದು ಕಾರ್ಯಕ್ರಮ ಹೀಗೆ ಪ್ರತಿವರ್ಷ ಇನ್ನೂ ವಿಜೃಂಭಣೆಯಿಂದ ನಡೆದುಕೊಂಡು ಬರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇವೆ. ಈ ಒಂದು ಹೊಸ ಪ್ರಯತ್ನ ನಿಜವಾಗಲೂ ಒಂದು ಅದ್ಬುತವಾದಂತಹ ಮತ್ತು ಧಾರ್ಮಿಕವಾದಂತಹ ಒಂದು ಪವಿತ್ರವಾದ ಪ್ರಯತ್ನ. ಆ ದೇವರು ಓಂಕಾರ ಸಮಿತಿಯ ವೃಂದಕ್ಕೆ ಇನ್ನೂ ಹೆಚ್ಚು ಶೃದ್ಧೆ, ಭಕ್ತಿ, ಶಕ್ತಿ ಕೊಡಲಿ ಎಂದು ಅಶಿಸುತ್ತೇನೆ.

ನಾನು ಒಬ್ಬ ಕಲಾವಿದನಾಗಿ ಹೇಳಲು ಇಚ್ಚಿಸುವದೇನೆಂದರೆ, ಓಂಕಾರ ಸಮಿತಿ ವೃಂದವು ಪ್ರತಿವರ್ಷ ವಿಧ-ವಿಧವಾದ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದನ್ನ ಭಕ್ತಿ-ಭಾವ ಮತ್ತು ಮನಃಪೂರ್ವಕವಾಗಿ ನಡೆಸಿಕೊಂಡು ಬರುತ್ತ ಇರುವದು ನಮ್ಮೆಲ್ಲರಿಗೆ ಗೊತ್ತಿರುವ ವಿಷಯ. ಈ ಒಂದು ಪವಿತ್ರವಾದ || ಶ್ರೀ ಪುರಂದರ ನಮನ|| ಭಕ್ತಿಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡು ನಮ್ಮಂತಹ ಸ್ಥಳೀಯ ಸಂಗೀತ ಕಲಾವಿದರನ್ನು ಗುರುತಿಸಿ ಈ ಒಂದು ಭವ್ಯವಾದ ವೇದಿಕೆಯ ಮೂಲಕ ಶ್ರೀ ಪುರಂದರದಾಸರ ಹರಿಕೀರ್ತನೆಯನ್ನು ಭಕ್ತಿಯಿಂದ ಹಾಡಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ನಮ್ಮ ಸ್ಥಳೀಯ ಎಲ್ಲ ಸಂಗೀತ ಕಲಾವಿದರ ಪರವಾಗಿ ನಾನು ಧನ್ಯವಾದಗಳನ್ನ ಅರ್ಪಿಸಲು ಇಚ್ಚಿಸುತ್ತೇನೆ.

ಹೃತ್ಪೂರ್ವಕ ಧನ್ಯವಾದಗಳು ನಿಮಗೆ

"ಜೈ ಓಂಕಾರ ಸಮಿತಿ"

ವಂದನೆಗಳೊಂದಿಗೆ,

ಇಂತಿ ನಿಮ್ಮ ಚಿಕ್ಕ ಕಲಾವಿದ

ರವಿಪ್ರಕಾಶ ಏ ಎಸ್

Monday, March 31, 2014

ಬೇವು ಬೆಲ್ಲದ ಉಗಾದಿ ಹಬ್ಬ

ಲೇಖಕರು: ರವಿಪ್ರಕಾಶ ಎ. ಎಸ್.

ಧನ್ಯವಾದಗಳು ಓಂಕಾರ ಸಮಿತಿ,

ಎಲ್ಲರಿಗೂ ನಮಸ್ಕಾರ ಹಾಗೂ ವರ್ಷದ ಆರಂಭದ ಹಬ್ಬವಾದ - ’ಉಗಾದಿ ಹಬ್ಬ’ದ ಶುಭಾಷಯಗಳು. ಬೇವು ಬೆಲ್ಲ ತಿಂದು ಸುಖವಾಗಿರಿ.

ಬೇವು-ಬೆಲ್ಲದ ಸವಿಯ ಒಳ ಅರ್ಥ

ನಮ್ಮೆಲ್ಲರ ಬಂಧು ಮತ್ತು ಗೆಳೆಯರಿಗೆಲ್ಲಾ ಉಗಾದಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಲು ಬಹಳ ಖುಶಿ ಅನಿಸಿದೆ. ಈ ವರುಷ ನಮ್ಮೆಲ್ಲರ ಜೀವನದಲ್ಲಿ ಆರೋಗ್ಯ, ಹರುಷ, ಗೆಲುವು, ಶಾಂತಿ, ಪ್ರಗತಿಯನ್ನೆಲ್ಲಾ ತಂದು ಕೊಡಲಿಯೆಂದು ಆಶಿಸುತ್ತೇನೆ ಎಂದು ಆ ಪರಮಾತ್ಮನಲ್ಲಿ ಬೇಡುತ್ತೇನೆ. 

ಉಗಾದಿ ಹಬ್ಬ ಒಂದು ಸಾಮಾಜಿಕ ಚಿಂತನೆ ಒಳಗೊಂಡಂತಹ ಹಬ್ಬ. ಈ ಹಬ್ಬ ಕಷ್ಟ - ಸುಖದ ಸಾಂಕೇತಿಕವಾಗಿದೆ. ಭೇವು-ಬೆಲ್ಲ ಅಂದರೆ ಬೇವು ಕಹಿ - ಅಂದರೆ ಕಷ್ಟ, ಬೆಲ್ಲ ಸಿಹಿ - ಅಂದರೆ ಸುಖ ಎಂದರ್ಥ. ಪ್ರತಿ ಒಂದು ಜೀವರಾಶಿಯಲ್ಲಿ ಕಷ್ಟ-ಸುಖ ತಪ್ಪಿದಲ್ಲ. ಇದು ಒಂದು ನಾಣ್ಯದ ಎರಡು ಮುಖಗಳಿದ್ದ ಹಾಗೆ. 

ಕಷ್ಟ ಬಂದಾಗ ಕುಗ್ಗದೆ ಮತ್ತು ಸುಖ ಬಂದಾಗ ಹಿಗ್ಗದೆ, ಈ ಎರಡನ್ನು ಸಮನಾಗಿ ಅರಿತು ಬಾಳುವುದನ್ನ ಕಲಿಸುತ್ತೆ ಈ ಉಗಾದಿ ಹಬ್ಬ, ಬೇವು-ಬೆಲ್ಲ ತಿನ್ನಿಸುವ ಮೂಲಕ. 

ಅದಕ್ಕಲ್ಲವೆ ನಾವು ಹೇಳೋದು "ಬೇವು ಬೆಲ್ಲ ತಿಂದು ಸುಖವಾಗಿರಿ" ಎಂದು. ಅಂದರೆ ಕಷ್ಟ - ಸುಖ ಜೀವನದಲ್ಲಿ ಬರುತ ಇರುತ್ತೆ ಅದನ್ನ ಸಮನಾಗಿ ತೆಗೆದುಕೊಂಡಾಗ ಬಾಳು ಹಸನಾಗುತ್ತೆ ಎಂದರ್ಥ. ಬೇವಿನ ಕಹಿಯನ್ನ ಬೆಲ್ಲದ ಸಿಹಿಯೊಂದಿಗೆ ಬೆರೆಸಿ ತಿಂದಾಗ ಉಂಟಾಗುವ ಸವಿಯೇ ಈ ಕಷ್ಟ -ಸುಖದ ಸವಿ. ಹೀಗೆ ಕಷ್ಟ - ಸುಖದ ಸಮ್ಮಿಶ್ರಣದೊಂದಿಗೆ ನಮ್ಮೆಲ್ಲರ ಜೀವನವನ್ನು ಸಿಹಿಯಾಗಿಸಿಕೊಳ್ಳಿ ಬಂಧುಗಳೇ.

ಹೀಗೂ ಮಸ್ಕತ್ ನಲ್ಲಿ ಬೇವಿನ ಮರಗಳಿಗೇನು ಕೊರತೆ ಇಲ್ಲ ಹಾಗೆ ಬೆಲ್ಲದ ಅಚ್ಚಿಗೂ ಕೊರತೆ ಇಲ್ಲ, ಹಾಗಾಗಿ ನಾವೆಲ್ಲ ಇಲ್ಲಿ ಇದ್ದುಕೊಂಡು ಉಗಾದಿ ಹಬ್ಬವನ್ನ ಸಂತೋಷದಿಂದ ಆಚರಿಸಿ ನಮ್ಮ ಕಷ್ಟ-ಸುಖವನ್ನು ಸಮನಾಗಿ ನಮ್ಮ ನಮ್ಮ ಜೀವನದಲ್ಲಿ ಸವಿಯುತ್ತ ಸಹ ಬಾಳ್ವೆಯನ್ನು ನಡೆಸುವ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ.

ಬೇವಿನ ಕಹಿ ಮತ್ತು ಬೆಲ್ಲದ ರುಚಿ ಸವಿದವನೆ ಬಲ್ಲ ಅಂದ ಹಾಗೆ, ತಾವೆಲ್ಲರೂ ಬೇವು-ಬೆಲ್ಲ ಸವಿದು ಜೀವನದಲ್ಲಿ ಕಷ್ಟ-ಸುಖವನ್ನು ಸಮನಾಗಿಸಿಕೊಳ್ಳಿ. ಆ ದೇವರು ಎಲ್ಲರಿಗೂ ಒಳ್ಳೆಯದನ್ನೇ ಮಾಡಲಿಯೆಂದು ಆಶಿಸುವ. 

ಇಂತಿ ನಿಮ್ಮವನೇ ಆದ,
ರವಿ ಪ್ರಕಾಶ.

Sunday, March 30, 2014

ಸಾಮಾಜಿಕ ಐಕ್ಯತೆ ಮತ್ತು ಭಕ್ತಿಭಾವದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ - 2014


ವರದಿ : ಪಿ.ಎಸ್.ರಂಗನಾಥಮಸ್ಕತ್ 
ಓಂಕಾರ ಸಮಿತಿಯು ಮಸ್ಕತ್ ಕನ್ನಡಿಗರ ಮತ್ತು ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ೧೪ ಮಾರ್ಚ್ ೨೦೧೪ (ಫಾಲ್ಗುಣ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಆಶ್ಲೇಷ ನಕ್ಷತ್ರ, ಮೀನ ಸಂಕ್ರಮಣ) ಶುಭ ಘಳಿಗೆಯಂದು ಶ್ರೀ ಕೃಷ್ಣ ಸಭಾಂಗಣದಲ್ಲಿ ಆಯೋಜಿಸಿದ್ದರು. 

ಪೂಜೆಯನ್ನು ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಶ್ರೀಮತಿ ಗಾಯತ್ರಿ ಮತ್ತು ಶ್ರೀ ರಘುರಾಮಚಂದ್ರ ದಂಪತಿಗಳು ವೇದಿಕೆಯ ಮೇಲೆ ಪೂಜಾವಿಧಾನಗಳನ್ನು ನೆರವೇರಿಸಿದರು. ಸಭಾಂಗಣದಲ್ಲಿ ಓಂಕಾರ ಸಮಿತಿಯು ಐವತ್ತಾರು ಪರಿವಾರದವರು ಕುಳಿತು ಶ್ರೀ ಸತ್ಯನಾರಾಯಣ ಪೂಜೆ ಮಾಡುವ ವ್ಯವಸ್ಥೆಯನ್ನು ಮಾಡಿಕೊಟ್ಟಿತ್ತು.

ಬೆಳಿಗ್ಗೆ ೯:೦೦ ಘಂಟೆಗೆ ಪೂಜೆಯು ಆರಂಭಗೊಂಡು ಪ್ರಾಥನೆ, ಸಂಕಲ್ಪ, ಅಭಿಷೇಕ, ಸತ್ಯನಾರಾಯಣ ಕಥಾ, ಭಜನೆ, ಮಂಗಳಾರತಿಯೊಂದಿಗೆ ಮಧ್ಯಾಹ್ನ ೧:೦೦ ಘಂಟೆಗೆ ಸಂಪನ್ನಗೊಂಡಿತು. ದೇವಸ್ಥಾನದ ಆವರಣದಲ್ಲಿ ಬಂದತಹ ಎಲ್ಲ ಸದ್ಭಕ್ತರಿಗೂ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಮೊದಲು ಗುರು ಗಣಪತಿ ಪ್ರತಿಷ್ಟಾಪನೆ, ನಂತರ ಶುದ್ದೀಕರಣ ಮಾಡಿ, ನವಗ್ರಹ ದೇವತೆಗಳಿಂದ ಹಿಡಿದು ಎಲ್ಲ ದೇವತೆಗಳನ್ನು ಕಳಶಕ್ಕೆ ಆವಾಹನೆ ಮಾಡಿದರು, 

ಪಂಚಾಮೃತ ಅಭಿಷೇಕ, ಹಾಲು, ಮೊಸರು ತುಪ್ಪ, ಬಾಳೆಹಣ್ಣು, ಜೇನುತುಪ್ಪ, ಸಕ್ಕರೆ ಮತ್ತು ಎಳೆನೀರಿ ನಿಂದ ತಯಾರಿಸಿದ ಪಂಚಾಮೃತವನ್ನು ಅಭಿಷೇಕಕ್ಕೆ ಉಪಯೋಗಿಸಲಾಯಿತು. 

ಶುದ್ದೋದಕ ಅಭಿಷೇಕ ನಂತರ ಪಂಚ ಕರ್ಫುರ, ಕುಂಕುಮ ಕೇಸರಿ, ಗಂಧ, ನೀರಿನ ಮಿಶ್ರಣದ ಗಂಧೋದಕ ಅಭಿಷೇಕ, ಮಾಡಿದರು.

ವಸ್ತ್ರ, ಅರಿಷಿಣ, ಕುಂಕುಮ, ಗಂಧ, ಹೂ ಗಳಿಂದ ಅಲಂಕಾರ ಮಾಡಿ ನಂತರ ಸತ್ಯನಾರಾಯಣ ದೇವರನ್ನು ಆವಾಹನೆ ಮಾಡಲಾಯಿತು. ತದನಂತರ ಲಕ್ಷ್ಮಿಪೂಜೆ ನೆರವೇರಿತು. ಸತ್ಯನಾರಾಯಣ ದೇವರ ೧೦೮ ಸ್ತೋತ್ರ ಗಳಿಂದ ಅರ್ಚನೆ ನಡೆಯಿತು. ತುಳಸಿ, ಮತ್ತು ವಿವಿಧ ಪುಷ್ಪಗಳನ್ನು ಅರ್ಚನೆಗೆ ಉಪಯೋಗಿಸಲಾಯಿತು.

ಸತ್ಯನಾರಾಯಣ ವೃತ ದ ೫ ಕಥೆಗಳನ್ನು ಸವಿಸ್ತಾರವಾಗಿ ಹೇಳಲಾಯಿತು. ಪ್ರತಿ ಕಥೆ ಯನ್ನು ಹೇಳಿದ ನಂತರ ದೇವರಿಗೆ ಫಲ ಸಮರ್ಪಣೆ ಮಾಡಿ, ಆರತಿ ಮಾಡಿದರು. ಐದನೇ ಅಧ್ಯಾಯ ಮುಗಿದ ನಂತರ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ, ಆಮೇಲೆ ಭಜನೆ ಕಾರ್ಯಕ್ರಮ ನಡೆಯಿತು. ತದನಂತರ ಎಲ್ಲ ನೈವೇದ್ಯ ಸಮರ್ಪಣೆ ಮಾಡಿ ಮಹಾ ಮಂಗಳಾರತಿ ನೇರವೇರಿಸಿದರು.

ಎಲ್ಲ ಭಕ್ತರಿಂದ ಪ್ರಾರ್ಥನೆ, ಸುಹಾಸಿನಿ ಪೂಜೆ, ಸುಮಂಗಲಿ ಪೂಜೆ, ಬ್ರಾಹ್ಮಣ ಪೂಜೆ, ನಂತರ ಕೊನೆಯಲ್ಲಿ ಪ್ರಾರ್ಥನೆ ಮಾಡಿ, ನಮಸ್ಕಾರ ಮಾಡಿ ಕೃಷ್ಣಾರ್ಪಣೆ ಬಿಟ್ಟು ವಿಸರ್ಜನೆ ನಡೆಯಿತು.

ದೇವಸ್ಥಾನದಲ್ಲಿ ಅಡಿಗೆ ಭಟ್ಟರಿಂದ ತಯಾರಿಸಿದ ಮಹಾಪ್ರಸಾದವನ್ನು ಸುಮಾರು ಒಂದು ಸಾವಿರ ಭಕ್ತಾದಿಗಳಿಗೂ ವಿತರಿಸಲಾಯಿತು. 

ಸಾಮಾನ್ಯವಾಗಿ ಸಾಮೂಹಿಕ ಪೂಜೆಯಲ್ಲಿ ಒಂದು ದಂಪತಿ ಯನ್ನು ಕೂರಿಸಿ ಪೂಜಾ ಕೈಂಕರ್ಯವನ್ನು ನೆರವೇರಿಸಿವುದು ಸಾಮಾನ್ಯ, ಆದರೆ ಓಂಕಾರ ಸಮಿತಿಯವರು ಸುಮಾರು ೬೦ ಜನರಿಗಾಗಿ ಪೂಜಾಪೀಠವನ್ನು ಸಿದ್ಧಗೊಳಿಸಿದ್ದರು. ಪ್ರತಿಯೊಬ್ಬರು ತಮ್ಮ ಕೈಯಿಂದ ಪೂಜೆ ನೆರೆವೇರಿಸಲು ಅನುವಾಗುವಂತೆ ಪೂಜೆಗಾಗಿ ಸತ್ಯನಾರಾಯಣ ಸ್ವಾಮಿ ವಿಗ್ರಹ, ಕಳಶ, ಫೋಟೊ, ಅರ್ಘ್ಯ ಪಾತ್ರೆ, ಪೂಜಾ ಮಣೆ ಇನ್ನು ಹಲವಾರು ಸಾಮಗ್ರಿಗಳನ್ನು ಪೂಜೆಗೆ ಕುಳಿತ ಸುಮಾರು ೫೬ ಪರಿವಾರದವರಿಗೆ ನೀಡಲಾಗಿತ್ತು.

ಸಭಾಂಗಣ ಹೂವಿನ ಅಲಂಕಾರ ಮತ್ತು ಫೋಟೊ ಗಳಿಂದ ಸತ್ಯನಾರಾಯಣ ಸ್ವಾಮಿ ಪೂಜೆಗೆ ಕಳೆ ಬಂದಿತ್ತು. ಸಭಾಂಗಣದ ಮುಕ್ಕಾಲು ಭಾಗ ಜಾಗ ಪೂಜೆಗೆ ಕುಳಿತುಕೊಳ್ಳುವ ದಂಪತಿಗಳಿಗೆ ಮೀಸಲಾಗಿಸಿತ್ತು. 

ಓಂಕಾರ ಸಮಿತಿಯ ಶಿಸ್ತು ಬದ್ಧ ಮೇಲ್ವಿಚಾರಣೆ ಪ್ರತಿಯೊಂದು ಕಾರ್ಯದಲ್ಲಿ, ಎದ್ದು ಕಾಣುತಿತ್ತು. ಎಲ್ಲ ಭಕ್ತಾದಿಗಳು ಓಂಕಾರ ಸಮಿತಿಯವರನ್ನು ಪ್ರಶಂಸುತ್ತಿರುವುದು ಕಂಡು ಬಂತು. ಮಹಾ ಪ್ರಸಾದಕ್ಕೆ ಬೇಕಾದ ಸಾಮಗ್ರಿಯಿಂದ ಹಿಡಿದು, ಪೂಜಾ ಸಾಮಗ್ರಿ, ಫಲಪುಷ್ಪ, ಸಭಾಂಗಣ ತಯಾರಿ, ಪೂಜಾ ಪೀಠ, ಪೂಜೆಗೆ ಬೇಕಾದ ಪ್ರತಿಯೊಂದು ಚಿಕ್ಕ ವಸ್ತುವಿನಿಂದ ಹಿಡಿದು ಎಲ್ಲವನ್ನು ಹೊಂದಿಸಿಕೊಂಡು ಬಹು ವಿಶಿಷ್ಟ ವಾಗಿ ಸತ್ಯನಾರಾಯಣ ದೇವರ ಪೂಜೆಯನ್ನು ನಡೆಸಿಕೊಟ್ಟರು ಜತೆಗೆ ಅಚ್ಚುಕಟ್ಟಾದ ಪ್ರಸಾದ ವಿತರಣೆ ಮಾಡಿ ಮಸ್ಕತ್ ಕನ್ನಡಿಗರಲ್ಲದೆ, ಎಲ್ಲ ಆಸ್ತಿಕರ ಮನಗೆದ್ದಿದ್ದು ವಿಶೇಷವಾಗಿತ್ತು.

Sunday, March 16, 2014

ಗುರು ಬಸವಣ್ಣನವರ ಆಶ್ವಾಸನೆ

ಲೇಖನ ಮತ್ತು ಸಂಗ್ರಹ : ಶ್ರೀಮತಿ ಭಾರತಿ ಬಳಗುರ್ಗಿ 

‘ನಿಮ್ಮನ್ನು ದೇವನೆಡೆಗೆ ಕರೆದೊಯ್ಯುವುದು ನನ್ನ ಹೊಣೆ’ -ಹೀಗೆ ನುಡಿದವರು ಗುರುಬಸವಣ್ಣನವರು. ಪರಮಾತ್ಮನೆಡೆಗೆ ಕರೆದುಕೊಂಡು ಹೋಗುವುದು ನನ್ನ ಜವಾಬ್ದಾರಿ ಎಂದು ಅವರು ಪೂರ್ಣ ಆಶ್ವಾಸನೆಯನ್ನು ಕೊಡುತ್ತಾರೆ.

ದೇವನನ್ನು ಪಡೆಯಬೇಕೆಂಬ ಹಂಬಲ ಮುಮುಕ್ಷುಗಳಲ್ಲಿರುತ್ತದೆ ನಿಜ! ಅದಕ್ಕಾಗಿ ಅನೇಕ ಜನ ಮುಮುಕ್ಷುಗಳು ಪರಿತಪಿಸುತ್ತಿರುತ್ತಾರೆ. ಅವನನ್ನು ಪಡೆಯುವ ಹಂಬಲದಲ್ಲಿ ನಾನಾ ರೀತಿಯ ಪೂಜೆ ಧ್ಯಾನ ಜಪ ತಪಗಳನ್ನು ಮಾಡುತ್ತಿರುತ್ತಾರೆ. ಕೆಲವರು ದೇವನ ನೆಲೆಕಲೆಗಳನ್ನು ಅರಿಯದೆ ಹಲವಾರು ದೇವತೆಗಳನ್ನು ಪೂಜಿಸುತ್ತಿರುತ್ತಾರೆ, ನೂರಾರು ದೇವಾಲಯಗಳಲ್ಲಿ ಪೂಜೆಯನ್ನು ಸಲ್ಲಿಸುತ್ತಿರುತ್ತಾರೆ. ಮತ್ತೆ ಕೆಲವರು ಬೆಟ್ಟ ಗುಡ್ಡಗಳಲ್ಲಿ ಧ್ಯಾನ ತಪಸ್ಸನ್ನು ಆಚರಿಸುತ್ತಿರುತ್ತಾರೆ. ಆದರೆ ಸಾಧನೆಯಲ್ಲಿ ಪರಿಪೂರ್ಣತೆ ಸಿಗದೆ ಪರಿತಪಿಸುತ್ತಿರುತ್ತಾರೆ.

ದೇವನನ್ನು ಕಾಣಲು ನಾನಾರೀತಿಯ ಮಾರ್ಗಗಳನ್ನು ಅನೇಕ ಧರ್ಮಗಳು, ಪಂಥಗಳು, ಮತಗಳು ಬೋಧಿಸುತ್ತಿವೆ. ಕೆಲವು ಧರ್ಮಗಳಲ್ಲಿ ದೇವನ ಅಸ್ತಿತ್ವವೇ ಇರದು. ‘ ಪ್ರಕೃತಿಯ ಬಂಧನದಿಂದ ಬಿಡುಗಡೆ ’ ಇದು ಆ ಧರ್ಮಗಳ ಗುರಿ. ಕೆಲವು ಧರ್ಮಗಳು ಆಂತರಿಕ ವಿಕಾಸವನ್ನೇ ಹೇಳುವುದಿಲ್ಲ. ಅಲ್ಲಿ ಧರ್ಮ ಸಂಘಟನೆ, ಬಾಹ್ಯ ಸಂಸ್ಕಾರ, ಮತ್ತು ಧಾರ್ಮಿಕ ಆಚರಣೆಗಳಿಗೆ ಒತ್ತುಕೊಡುತ್ತಾರೆ. ಪೂಜೆಯೇ ಇಲ್ಲದ ಧರ್ಮವೂ ಸಹ ಇದ್ದು ಅಲ್ಲಿಯೂ ಸಹ ಧರ್ಮಸಂಘಟನೆ, ಧಾರ್ಮಿಕ ಚಟುವಟಿಕೆಗೆ ಹೆಚ್ಚು ಗಮನವಿದೆಯೇ ಹೊರತು ತನ್ನಂತರಂಗವನ್ನು ಒಳಹೊಕ್ಕು ದೇವನ ಅರಿವನ್ನು ಪಡೆಯುವ ಜ್ಞಾನವಿಲ್ಲ. ಮತ್ತೆ ಕೆಲವು ಧರ್ಮಗಳಲ್ಲಿ ವಿಪರೀತವಾಗಿ ಬಾಹ್ಯವಾದ ಧಾರ್ಮಿಕ ಆಚರಣೆಗಳು ತುಂಬಿಹೋಗಿ ಸಾಧಕರಿಗೆ ಸ್ವತಂತ್ರವಾಗಿ ಆಲೋಚನೆಯನ್ನು ಮಾಡಲು ಸಹ ಅವಕಾಶವಿರದು. ಕೆಲವು ಮತಗಳಲ್ಲಿ ಅತ್ಯಂತ ಕ್ಲಿಷ್ಟವಾದ ತತ್ತ್ವಜ್ಞಾನವಿದ್ದು ಅದನ್ನು ಆಚರಣೆಗೆ ತರುವುದು ಸಾಧಕರಿಗೆ ಕಷ್ಟಸಾಧ್ಯ. ಅಲ್ಲಿ ಕೇವಲ ಪಾಂಡಿತ್ಯ, ವಿಚಾರಶೀಲತೆಯನ್ನು ಬೆಳಸಿಕೊಳ್ಳಲು ಹೆಚ್ಚಿನ ಆಸಕ್ತಿಯನ್ನು ವಹಿಸುತ್ತಾರೆಯೇ ಹೊರತು ಅಳವಡಿಕೆ ಕಷ್ಟ. 

ಇಂತಹ ಸನ್ನಿವೇಶದಲ್ಲಿ ಪರಮಾತ್ಮನ ಹಂಬಲವುಳ್ಳ ಸಾಧಕನಿಗೆ ಗೊಂದಲವಾಗುವುದು ಸಹಜ. ಅವನು ಒಂದರಲ್ಲಿಯೂ ಪರಿಪೂರ್ಣತೆ ಸಿಗದೆ ಹಲವಾರು ಧರ್ಮ, ಮತ, ಪಂಥ, ತತ್ತ್ವಜ್ಞಾನ ಇತ್ಯಾದಿಯಾಗಿ ಅರಸುತ್ತಿರುತ್ತಾನೆ. ಕೆಲವೊಮ್ಮೆ ಆಧ್ಯಯನದಲ್ಲಿ ತೊಡಗಿದರೆ, ದಟ್ಟವಾದ ಕಾಡನ್ನು ಹೊಕ್ಕು ಹೊರಬರಲಾರದೆ ಪರಿತಪಿಸುವಂತಾಗುತ್ತದೆ. ಇಂತಹ ಸಾಧಕರಿಗೆ ಗುರುಬಸವಣ್ಣನವರು ಅಭಯವನ್ನು ಕೊಟ್ಟು ಹೇಳುತ್ತಾರೆ, 

ಹಲವು ಕೊಂಬಿಂಗೆ ಹಾಯಲು ಬೇಡ,
ಬರಿ ಕಾಯಕೆ ಕೈ ನೀಡಲುಬೇಡ,
ಲೋಗರಿಗೆಡೆಗೊಟ್ಟು ಭ್ರಮಿತನಾಗಿರಬೇಡ!
ಆಚಾರವೆಂಬುದು ಹಾವಸೆಗಲ್ಲು,
ಭಾವ ತಪ್ಪಿದ ಬಳಿಕ ಏಗೈದಡಾಗದು.
ಅಂಜದಿರು, ಅಳುಕದಿರು, ಪರದೈವಕ್ಕೆರಗದಿರು:
ಕೂಡಲಸಂಗಯ್ಯನ ಕೈಯಲು ಈಸುವುದೆನ್ನ ಭಾರ! 

ಆಧ್ಯಾತ್ಮಿಕ ಹಂಬಲವುಳ್ಳ ಮುಮುಕ್ಷುಗಳು ದೇವನ ಕಾರುಣ್ಯವನ್ನು ಪಡೆಯಲು ಸರಿಯಾದ ಮಾರ್ಗದರ್ಶನವಿಲ್ಲದೆ ಹೊಯ್ದಾಡುವಾಗ, ೧೨ನೇ ಶತಮಾನದಲ್ಲಿ ಸಾವಿರಾರು ಸಾಧಕರನ್ನು ಸಿದ್ಧಪುರುಷರನ್ನಾಗಿ ಮಾಡಿದ ಮಹಾಗುರು ಬಸವಣ್ಣನವರು ಎಲ್ಲರಿಗೂ ಸಾಧನೆಯ ಮಾರ್ಗವನ್ನು ಬೋಧಿಸಿದರು. ಅದಕ್ಕಾಗಿಯೇ ಅವರು, ‘ಬೇರೆ ಬೇರೆ ಸಾಧನಾ ಮಾರ್ಗ, ಯೋಗ, ಅಧ್ಯಯನಗಳೆಂಬ ಹಲವು ಕೊಂಬೆಗಳಿಗೆ ಹಾಯಬೇಡಿ. ಅವುಗಳಿಂದ ಮಾನಸಿಕ ತೃಪ್ತಿಯೆಂಬ ಕಾಯಿ ಸಿಗಬಹುದೇ ವಿನಹಾ ನಿಷ್ಪತ್ತಿಯೆಂಬ ಪರಿಪೂರ್ಣ ಹಣ್ಣು ಸಿಗದು. ಧಾರ್ಮಿಕತೆಯ ಸೋಗಿನಲ್ಲಿ ಹೊಟ್ಟೆಹೊರೆಯುವುದು, ಆಸ್ತಿ ಬೆಳೆಸುವುದು, ಕೀರ್ತಿ ಅಂತಸ್ತಿಗೆ ಹಂಬಲಿಸುವುದು ಇತ್ಯಾದಿಗಳಿಗೆ ಎಡೆಗೊಡಬೇಡಿ. ದೇವನ ನೆಲೆಕಲೆಗಳನ್ನು ಅರ್ಥಮಾಡಿಕೊಳ್ಳದ, ಶರಣ ಮಾರ್ಗದಲ್ಲಿರದ ಲೌಕಿಕ ವ್ಯಕ್ತಿಗಳ ವಿಚಾರಕ್ಕೆ, ಅವರುಗಳ ತರ್ಕಕ್ಕೆ ತಲೆದೂಗಿ ಭ್ರಮೆಗೊಳಗಾಗದಿರಿ’ ಎಂದು ಎಚ್ಚರಿಸುತ್ತಾರೆ.

ಪರಮಾತ್ಮನನ್ನು ಕಾಣಲು ಕೇವಲ ಭಕ್ತಿ-ಜ್ಞಾನವಿದ್ದರಷ್ಟೇ ಸಾಲದು. ಆಚಾರವು ಬಹಳ ಮುಖ್ಯ. ಜೀವನದಲ್ಲಿ ವ್ಯಕ್ತಿಯ ನಡೆ ಶುದ್ಧವಾಗಿದ್ದರೆ ಅದು ಸಾಧನಾ ಮಾರ್ಗದ ಸೋಪಾನವಿದ್ದಂತೆ. ಆಚಾರವು ತಪ್ಪಿದಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲ. ‘ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದಡೆ ಹಿಡಿದಿರ್ದ ಲಿಂಗವು ಘಟಸರ್ಪನಯ್ಯಾ. ನುಡಿಯಲು ಬಾರದು, ನಡೆಯಲು ಬಾರದು, ಲಿಂಗದೇವನೆ ದಿಬ್ಯವೊ ಅಯ್ಯಾ. ಬಡವನ ಕೋಪ ಅವುಡಿಗೆ ಮೃತ್ಯುವಾದಂತೆ ಕಡೆದಾಂಟದು ಕಾಣಾ, ಕೂಡಲಸಂಗಮದೇವಾ’ ಎನ್ನುವಂತೆ, ಪರಮಾತ್ಮನನ್ನು ಹಂಬಲಿಸುವವರು ಮೊದಲು ಸದಾಚಾರವನ್ನು ಅಳವಡಿಸಿಕೊಳ್ಳಬೇಕು ಎಂದು ಸಾಧನೆಯ ಮೊದಲ ಹಂತವನ್ನು ಗುರುಬಸವಣ್ಣನವರು ಬೋಧಿಸುತ್ತಾರೆ. ಅವರು ಹೇಳುತ್ತಾರೆ, ಆಚಾರವೆಂಬುದು ಹಾವಸೆಗಲ್ಲಿದ್ದಂತೆ , ಪಾಚಿಕಟ್ಟಿದ ಕಲ್ಲಿನ ಮೇಲೆ ನಡೆಯಬೇಕಾದರೆ ಅತಿ ಎಚ್ಚರ ಅವಶ್ಯಕ.

ಆಚಾರದಲ್ಲಿ ತಪ್ಪಿ ಜಾರಿ ಬಿದ್ದಲ್ಲಿ ಅಧೋಗತಿಗೆ ಹೋಗುವುದು ಖಂಡಿತ. ಆಚಾರದಲ್ಲಿ ಲೋಪವಾಗಿ, ಭಕ್ತಿ-ಜ್ಞಾನವಿದ್ದರೂ ದೇವನು ಒಲಿಯನು ಎಂಬುದನ್ನು ಅವರು ಸ್ಪಷ್ಟವಾಗಿ ಹೇಳುತ್ತಾರೆ. 

ಸಾಧಕನಿಗೆ ಪರಮಾತ್ಮನನ್ನು ಒಲಿಸಲು ಕಷ್ಟವಾಗಿರುವುದಕ್ಕೆ ಮುಖ್ಯ ಕಾರಣವೆಂದರೆ ಅವನು ದೇವನ ಸ್ವರೂಪವನ್ನು ಅರ್ಥಮಾಡಿಕೊಳ್ಳದಿರುವುದು. ಇರುವ ಒಬ್ಬನೇ ದೇವನನ್ನು ಪೂಜಿಸಿ, ಧ್ಯಾನಿಸದೆ, ಹಲವಾರು ಪುರಾಣಗಳನ್ನು ಓದಿ ನೂರಾರು ದೇವತೆಗಳನ್ನು ದೇವರೆಂದು ಭಾವಿಸಿ ಗೊಂದಲಮಾಡಿಕೊಂಡಿದ್ದಾನೆ. ಹಣಕ್ಕಾಗಿ ಒಬ್ಬರು, ಜ್ಞಾನಕ್ಕಾಗಿ ಒಬ್ಬರು, ಸಮಸ್ಯೆಗಳು ಬಂದಾಗ ಒಬ್ಬರು ಹೀಗೆ ಅನೇಕ ಕಾಲ್ಪನಿಕ ದೇವತೆಗಳನ್ನು ಪೂಜಿಸುತ್ತ ಅಜ್ಞಾನದಲ್ಲಿ ಮುಳುಗಿದ್ದಾನೆ.

ಗುರುಬಸವಣ್ಣನವರು ಹೇಳುತ್ತಾರೆ, ಪರಮಾತ್ಮನು ಒಬ್ಬನೇ. ಅವನೇ ಬ್ರಹ್ಮಾಂಡದ ಸೃಷ್ಟಿಕರ್ತ, ಅವನೇ ಸಕಲ ಜೀವರಾಶಿಯ ಕರ್ತ. ಜಗತ್ತನ್ನು ನಿಯಂತ್ರಿಸುವವನೂ ಅವನೇ, ಎಲ್ಲ ಹುಟ್ಟು ಸಾವುಗಳಿಗೆ ಕಾರಣೀಭೂತನಾಗಿರುವವನೂ ಅವನೇ. ಪ್ರತಿ ಜೀವರಾಶಿಯ ಕರ್ಮ ಫಲಗಳನ್ನು ನೀಡುವವನೂ ಅವನೇ, ಕರ್ಮಾಧ್ಯಕ್ಷನೂ ಅವನೇ. ಸಕಲ ಜೀವರಾಶಿಯ ದುಃಖವನ್ನು ಪರಿಹರಿಸುವವನೂ ಅವನೇ. ಇದನ್ನು ಅರಿತು ದೃಢವಾದ ನಂಬಿಕೆಯಿಂದ ಅವನನ್ನು ಪೂಜಿಸು. ಅವನು ಸರ್ವರನ್ನೂ ರಕ್ಷಿಸುತ್ತಾನೆ ಎಂಬ ನಂಬಿಕೆಯನ್ನು ಆಳವಾಗಿ ಬೇರೂರಿಸಿಕೋ. ನಿನ್ನ ಭಕ್ತಿಯನ್ನು ಆ ಒಬ್ಬನೇ ಪರಮಾತ್ಮನಲ್ಲಿ ಕೇಂದ್ರೀಕರಿಸಿ ಪೂಜೆ ಧ್ಯಾನಾದಿಗಳನ್ನು ಮಾಡು. ಬೇರೆ ದೇವತೆಗಳ ಪೂಜೆಯನ್ನು ಬಿಡುವಲ್ಲಿ ಭಯ ಪಡದಿರು. ನಿನ್ನಲ್ಲಿ ಭಕ್ತಿ-ಜ್ಞಾನವನ್ನು ಪೋಷಿಸಿಕೊಂಡು, ಏಕದೇವನಿಷ್ಠನಾಗಿ ಆಚಾರವನ್ನು ಶುದ್ಧಗೊಳಿಸಿಕೊಂಡೆಯಾದರೆ ಪರಮಾತ್ಮನಲ್ಲಿಗೆ ನಿನ್ನನ್ನು ಸೇರಿಸುವ ಜವಾಬ್ದಾರಿ ನನ್ನದು ಎಂದು ಅಭಯವನ್ನು, ಆಶ್ವಾಸನೆಯನ್ನು ಗುರುಬಸವಣ್ಣನವರು ಈ ವಚನದ ಮೂಲಕ ಕೊಡುತ್ತಿದ್ದಾರೆ. ಆದ್ದರಿಂದ ಗುರುಬಸವಣ್ಣನವರಲ್ಲಿ ಪೂರ್ಣ ನಂಬಿಕೆಯನ್ನಿಟ್ಟು, ಅವರು ತೋರಿದ ಸಾಧನಾ ಪಥದಲ್ಲಿ ಸಾಗಿದರೆ ಅವರೇ ನಮ್ಮನ್ನು ಪರಮಾತ್ಮನಲ್ಲಿಗೆ ಕರೆದೊಯ್ಯುವುದರಿಂದ ಅವರಲ್ಲಿ ಸಂಪೂರ್ಣ ಶರಣಾಗತಿಯನ್ನು ಹೊಂದೋಣ. 

Wednesday, March 5, 2014

ಪ್ರಾಪಂಚಿಕತೆ ಮತ್ತು ಪಾರಮಾರ್ಥಿಕ:ಒಂದು ಚಿಂತನೆ

ಲೇಖನ ಮತ್ತು ಸಂಗ್ರಹ : ಶ್ರೀಮತಿ ಭಾರತಿ ಬಳಗುರ್ಗಿ 

ಪ್ರಾಪಂಚಿಕ ಮತ್ತು ಪಾರಮಾರ್ಥಗಳು ಈ ಜಗತ್ತಿನಲ್ಲಿ ಸಮ್ಮಿಳನಗೊಂಡಿವೆ. ಪ್ರಾಪಂಚಿಕ ಜೀವನವನ್ನು ನಡೆಸುವ ವ್ಯಕ್ತಿಗಳ ಗುರಿಯೇ ಬೇರೆ. ಪಾರಮಾರ್ಥಿಕ ಜೀವನವನ್ನು ನಡೆಸುವ ವ್ಯಕ್ತಿಗಳ ಗುರಿಯೇ ಬೇರೆ. ಪ್ರಾಪಂಚಿಕರ ಗುರಿಗಳಲ್ಲಿ ಕೆಲವರದು ತಮ್ಮ ಸಂಸಾರಜೀವನಕ್ಕೆ ಸೀಮಿತವಾಗಿದ್ದರೆ ಮತ್ತೆ ಕೆಲವರದು ಸಮಾಜ ಸೇವೆ, ಧಾರ್ಮಿಕತೆ, ಕೀರ್ತಿ, ಹಣ, ಹೊಸ ವಿಚಾರಗಳು, ಸಂಶೋಧನೆ ಇತ್ಯಾದಿಗಳನ್ನೊಳಗೊಂಡಿರುತ್ತದೆ. ಒಟ್ಟಿನಲ್ಲಿ ಗುರಿಯು ಅವರ ಜೀವಿತದ ಅವಧಿಗೆ ಸೀಮಿತವಾಗಿರುತ್ತದೆ. ಆದರೆ ಪಾರಮಾರ್ಥಿಕರಲ್ಲಿನ ಗುರಿಗಳು ತಮ್ಮ ಜೀವಿತದ ಅವಧಿಯನ್ನು ಮೀರಿ ಸಾಧಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತವೆ. 

ಆಧ್ಯಾತ್ಮಿಕ ಜೀವನವನ್ನು ಅಳವಡಿಸಿಕೊಂಡ ಶರಣರು ಪ್ರಾಪಂಚಿಕ ಜೀವನಕ್ಕೆ ತಿಲಾಂಜಲಿಯನ್ನಿತ್ತು ಜೀವನದ ವಾಸ್ತವಿಕ ಸತ್ಯವನ್ನು ಕಂಡುಕೊಂಡರು. ಈ ಜಗತ್ತಿನಲ್ಲಿ ಆಧ್ಯಾತ್ಮವನ್ನು ಬಿಟ್ಟು ಬೇರೆ ಯಾವುದೇ ವಿಚಾರದಲ್ಲಿ ಎಂತಹ ಹಂತವನ್ನು ಮುಟ್ಟಿದರೂ ಅದು ಕೇವಲ ಜೀವಿತಾವಧಿಗೆ ಸೀಮಿತವಾದುದೆಂದು ಅರಿದ ಅವರು, ಅದನ್ನು ಮೀರಿ ಹೋಗುವ ಉಪಾಯವನ್ನು ಕಂಡುಕೊಂಡರು. ಶರಣರು ಪಾರಮಾರ್ಥಿಕಕ್ಕೆ ಹೋಗುವಲ್ಲಿ ಪ್ರಾಪಂಚಿಕ ವ್ಯಕ್ತಿಯು ಸಹಜವಾಗಿ ಎಲ್ಲಿ ಎಡವುತ್ತಾನೋ ಅದನ್ನು ಗ್ರಹಿಸಿಕೊಂಡು ದಾಟಿ ನಡೆದರು. ಪ್ರಾಪಂಚಿಕತೆಯು ಮನುಷ್ಯನಲ್ಲಿ ಬರುವ ರೀತಿಯನ್ನೂ ಹಾಗೂ ಪಾರಮಾರ್ಥವನ್ನು ಪಡೆಯುವ ವಿಧಾನದ ಬಗ್ಗೆ ಅಲ್ಲಮಪ್ರಭುದೇವರು ಹೇಳುತ್ತಾರೆ, 

ಅಜ್ಞಾನವೆಂಬ ತೊಟ್ಟಿಲೊಳಗೆ ಜ್ಞಾನವೆಂಬ ಶಿಶುವ ಮಲಗಿಸಿ
ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ!
ತೊಟ್ಟಿಲು ಮುರಿದು ನೇಣು ಹರಿದು ಜೋಗುಳ ನಿಂದಲ್ಲದೆ
ಗುಹೇಶ್ವರನೆಂಬ ಲಿಂಗವ ಕಾಣಬಾರದು. 

ಪ್ರಾಪಂಚಿಕತೆಯೆಂಬುದು ಕೇವಲ ಹೊರಗಣ ವಿಷಯಗಳಿಂದ ಕೂಡಿದ ಅಜ್ಞಾನದ ತೊಟ್ಟಿಲಾಗಿದೆ. ಲೌಕಿಕ ವ್ಯಕ್ತಿಯು ತನ್ನ ಮನಸ್ಸನ್ನು ಅಂತರ್ಮುಖ ಮಾಡಿಕೊಂಡು ತನ್ನಂತರಾಳದಲ್ಲಿನ ಅದ್ಭುತ ಜ್ಞಾನವನ್ನು ವಿಕಾಸಮಾಡಿಕೊಳ್ಳದೆ ದೇಹ ಮತ್ತು ಇಂದ್ರಿಯಗಳ ಕಡೆಗೆ ಮನಸ್ಸನ್ನು ಸೀಮಿತಗೊಳಿಸಿ ಕೇವಲ ಹೊರಗಣ ವಿಚಾರಗಳನ್ನೇ ಗ್ರಹಿಸಿಕೊಳ್ಳುತ್ತ ಅಜ್ಞಾನದ ತೊಟ್ಟಿಲನ್ನು ಸೃಷ್ಟಿಸಿಕೊಂಡಿದ್ದಾನೆ. ಮನಸ್ಸನ್ನು ಅಂತರ್ಮುಖ ಮಾಡಿಕೊಳ್ಳದೆ ಬಹಿರ್ಮುಖ ಮಾಡಿಕೊಂಡಿದ್ದಾನೆ. ಹೊರಗಿನ ಜ್ಞಾನಕ್ಕೆ ಒತ್ತುಕೊಡುತ್ತಿದ್ದಾನೆ. ಹಿಂದಿನ ವೇದ ಶಾಸ್ತ್ರ ಆಗಮ ಪುರಾಣಗಳಾಗಲಿ, ಇಂದಿನ ವಿಜ್ಞಾನ, ಸಮಾಜ ಶಾಸ್ತ್ರ, ಅರ್ಥಶಾಸ್ತ್ರ, ಧಾರ್ಮಿಕತೆ, ಇತ್ಯಾದಿಗಳನ್ನೊಳಗೊಂಡ ಯಾವುದೇ ವಿಚಾರಗಳಾಗಲೀ ಅವು ಆ ತೊಟ್ಟಿಲಿಗೆ ತೂಗುವ ಹಗ್ಗವಾಗಿವೆ. ಅವುಗಳಿಂದ ಒದಗಿದ ಜ್ಞಾನವನ್ನೇ ಪರಿಪೂರ್ಣಜ್ಞಾನವೆಂದು ತಿಳಿದು ಭ್ರಾಂತಿಗೆ ಒಳಗಾಗಿದ್ದಾನೆ. ಅವನ್ನೇ ಸಂಪೂರ್ಣವಾಗಿ ನೆಚ್ಚಿಕೊಂಡಿರುವ ಕಾರಣ ಅವುಗಳ ಜ್ಞಾನವೇ ಅವನಿಗೆ ಜೋಗುಳವಾಗಿ ಮರೆವೆಯೆಂಬ ಗಾಢವಾದ ನಿದ್ರೆಯಲ್ಲಿ ಮೈಮರೆತ್ತಿದ್ದಾನೆ.

ಇದನ್ನು ಒಂದು ದೃಷ್ಟಾಂತದ ಮೂಲಕ ಅರ್ಥೈಸಬಹುದು. ಒಂದು ಮೃಗಾಲಯದಲ್ಲಿ ಒಂದು ಹುಲಿಯನ್ನು ಸುಮಾರು ಒಂದು ಕಿ.ಮೀಟರ್ ಸುತ್ತಳತೆಯ ಪ್ರದೇಶದಲ್ಲಿ ಎತ್ತರದ ಬೇಲಿಯನ್ನು ಹಾಕಿ ಬಿಡಲಾಗಿತ್ತು. ಸುಮಾರು ಒಂದು ವರ್ಷ ಅದರಲ್ಲೇ ಆ ಹುಲಿಯ ಜೀವನ ಸಾಗಿತ್ತು. ನಂತರ ಅದರ ಸುತ್ತ ಇರುವ ಬೇಲಿಯನ್ನು ತೆಗೆದು ಎರಡು ಕಿ.ಮೀಟರ್‌ಗೆ ವಿಸ್ತರಿಸಲಾಯಿತ್ತು. ವಿಚಿತ್ರವೆಂದರೆ ಆ ಹುಲಿ ಮೊದಲು ಹಾಕಿದ್ದ ಬೇಲಿಯ ಸೀಮೆಯನ್ನು ದಾಟದೆ ಒಂದು ಕಿ.ಮೀಟರ್ ವ್ಯಾಪ್ತಿಯಲ್ಲೇ ಇರುತ್ತಿತ್ತು. ಅದಕ್ಕೆ ಅಷ್ಟೇ ಜಾಗದಲ್ಲಿ ಓಡಾಡುವ ಅಭ್ಯಾಸವಾಗಿಬಿಟ್ಟಿತ್ತು.

ಆ ಹುಲಿಯಂತೆಯೇ ಮನುಷ್ಯನ ಸ್ಥಿತಿಯೂ ಸಹ. ಅವನು ಧಾರ್ಮಿಕ ಗ್ರಂಥ, ವೈಜ್ಞಾನಿಕ ಸಂಶೋಧನೆ, ಎಂಬಿತ್ಯಾದಿಯಾದ ‘ಸೀಮೆ’ಯಲ್ಲೇ ಜ್ಞಾನವನ್ನು ತಿಳಿದು, ಅದೇ ಶ್ರೇಷ್ಠವೆಂಬ ಬೇಲಿಯನ್ನು ಹಾಕಿಕೊಂಡಿದ್ದಾನೆ. ಹೊಸ ವಿಚಾರ ಬಂದರೂ ಅವುಗಳನ್ನೂ ಹಿಂದಿನದಕ್ಕೇ ಹೋಲಿಸಿ ಸೀಮಿತವನ್ನಾಗಿ ಮಾಡಿಕೊಳ್ಳುತ್ತಿದ್ದಾನೆ.

ಅಲ್ಲಮಪ್ರಭುದೇವರು ಹೇಳುತ್ತಾರೆ, ಎಲ್ಲಿಯವರೆಗೆ ವ್ಯಕ್ತಿಯು ದೇಹ ಮತ್ತು ಇಂದ್ರಿಯಗಳಿಗೆ ಮನಸ್ಸನ್ನು ಹರಿಸಿ, ಹೊರಗಿನ ಜ್ಞಾನ-ವಿಜ್ಞಾನಗಳಲ್ಲಿ ಮುಳುಗಿರುವನೋ, ಎಲ್ಲಿಯವರೆಗೆ ಹೊರಗಿನ ವಿಚಾರಗಳೆಂಬ ಅಜ್ಞಾನದ ತೊಟ್ಟಿಲನ್ನು ಸೃಷ್ಟಿಸಿಕೊಳ್ಳುತ್ತಿರುವನೋ, ಅಲ್ಲಿಯವರೆಗೆ ಅವನಲ್ಲಿ ಅಂತರಂಗದ ಸುಜ್ಞಾನ ನೆಲೆಗೊಳ್ಳದು. ಎಲ್ಲಿಯವರೆಗೆ ಹಿಂದಿನ ವೇದ ಶಾಸ್ತ್ರವೆಂಬ ಹಗ್ಗವನ್ನು ಹರಿಯುವುದಿಲ್ಲವೋ, ವಿಚಾರಗಳೆಂಬ ಜೋಗುಳವನ್ನು ಆಲಿಸುವುದನ್ನು ನಿಲ್ಲಿಸಿ ಅಂತರ್ಮುಖನಾಗಿ ತನ್ನಂತರಂಗದಲ್ಲೇ ಇರುವ ಅದ್ಭುತ ಜ್ಞಾನವನ್ನು ಅರಿಯುವುದಿಲ್ಲವೋ, ಅಲ್ಲಿಯವರೆಗೆ ಅವನು ಪರಿಪೂರ್ಣಜ್ಞಾನಿಯಾಗನು!

ಹೊರಗಿನ ವಿಚಾರಗಳು ಮನುಷ್ಯನನ್ನು ಬಹಿರ್ಮುಖನನ್ನಾಗಿ ಮಾಡುತ್ತವೆ. ಹೊರಗಿನ ಜ್ಞಾನವನ್ನು ಪಡೆದಾಕ್ಷಣ ತಾನು ಬಹಳ ತಿಳಿದೆನೆಂದುಕೊಳ್ಳುತ್ತಾನೆ. ಆದರೆ ನೈಜಜ್ಞಾನವು ಅವನಿಂದ ದೂರವೇ ಉಳಿದಿರುತ್ತದೆ. ಹಲವಾರು ಸಲ ಹೊರಗಿನ ಜ್ಞಾನವನ್ನು ಪಡೆಯುವ ಧಾವತಿಯಲ್ಲಿ ಮನಸ್ಸು ಮತ್ತು ಇಂದ್ರಿಯಗಳ ಸೆಳೆತ ಹಾಗೂ ಅಹಂಕಾರದಿಂದ ಲೌಕಿಕತೆಯಲ್ಲೇ ಮುಳುಗಿಹೋಗುತ್ತಾನೆ. ಆದ್ದರಿಂದ ಜ್ಞಾನಿಯಾಗಬೇಕೆಂಬ ಹಂಬಲವಿರುವ ವ್ಯಕ್ತಿಯು ಮೊದಲು ತನ್ನನ್ನು ತಾನು ಅವಲೋಕಿಸಿಕೊಳ್ಳುತ್ತ ಯಾವ ಚಿಂತನೆಗಳು ಅಂತರಂಗದಲ್ಲಿ ಮೂಡುತ್ತಿವೆ, ಯಾವ ಚಿಂತನೆಗಳು ಬಹಿರಂಗದಿಂದ ಬರುತ್ತಿವೆ ಎಂಬುದನ್ನು ಗುರುತಿಸಬೇಕು. ತಾನು ಸುಜ್ಞಾನಿಯಾಗಲು ತನ್ನಲ್ಲೇ ಅದ್ಭುತವಾದ ಜ್ಞಾನವಿದೆಯೆಂಬುದನ್ನು ಮೊದಲು ಮನವರಿಕೆ ಮಾಡಿಕೊಳ್ಳಬೇಕು. ಹೊರಗಿನ ವ್ಯಕ್ತಿಗಳಿಂದಲಾಗಲಿ, ಪುಸ್ತಕಗಳಿಂದಲಾಗಲಿ ಬಂದ ಜ್ಞಾನಕ್ಕಿಂತ ತನ್ನಲ್ಲೇ ಜ್ಞಾನದ ಭಂಡಾರವೇ ಇದೆ ಎಂಬುದನ್ನು ಒಳಹೊಕ್ಕು ನೋಡಬೇಕು. ಯಾವುದೇ ಜ್ಞಾನದ ಮೂಲವು ಅಂತರಂಗದಲ್ಲಿದೆಯೇ ವಿನಹಾ ಬಹಿರಂಗದಲ್ಲಿಲ್ಲ. ಬಹಿರಂಗದಲ್ಲಿ ವಸ್ತುಗಳಿರುತ್ತವೆ. ಆದರೆ ಅದರ ಜ್ಞಾನ ವ್ಯಕ್ತಿಯೊಳಗೇ ಇರುತ್ತದೆ. ವಿಜ್ಞಾನಿಗಳ ಹೊಸ ಆವಿಷ್ಕಾರಗಳು ಅವರಲ್ಲಿ ಹೊರಗಿನಿಂದ ಬರದೆ ಅವರ ಅಂತರಂಗದಿಂದ ಹೊರಹೊಮ್ಮಿರುತ್ತದೆ. ಅದನ್ನೇ ಪ್ರಭುದೇವರು ಹೇಳುತ್ತಾರೆ, ಪ್ರತಿಯೊಬ್ಬ ವ್ಯಕ್ತಿಯಲ್ಲಿ ‘ಜ್ಞಾನವೆಂಬ ಶಿಶು’ ಅಡಗಿದೆ ಎಂದು.

ಆದ್ದರಿಂದಲೇ ಆಧ್ಯಾತ್ಮಿಕ ವ್ಯಕ್ತಿಗಳು ಅನುಭಾವಿಗಳಾಗಿರುತ್ತಾರೆ. ಅವರು ಹೊರಗಿನ ವಿಚಾರಗಳಿಗಿಂತ ಅಂತರಂಗದ ಅವಲೋಕನದಲ್ಲಿ ತೊಡಗಿರುತ್ತಾರೆ. ಅಂತರಂಗದಲ್ಲಿ ತಮ್ಮ ಮೂಲ ಶಕ್ತಿಯನ್ನು ಅರಿಯುವಷ್ಟರ ಮಟ್ಟಿಗೆ ಉನ್ನತ ಸ್ಥಿತಿಗೇರಿರುತ್ತಾರೆ. ೧೨ ನೇ ಶತಮಾನದಲ್ಲಿ ಶರಣರು ಅಂತರಂಗವನ್ನು ಹೊಕ್ಕು ಅತ್ಯಂತ ವಿನೂತನವಾದ, ಇತರರಿಗೆ ಅಸಾಧ್ಯವೆನಿಸಿದ ನಿಗೂಢವಾದ ಆಧ್ಯಾತ್ಮವಿಚಾರಗಳನ್ನು ಹೊರತೆಗೆದು ಜಗತ್ತಿಗೆ ನೀಡಿದರು. ಹೀಗೆ ಅವರು ಅನುಭಾವಿಗಳಾದರು. ಯಾರು ಅನುಭಾವಿಗಳೋ, ಯಾರು ತಮ್ಮ ಅಂತರಂಗದಿಂದ ಜ್ಞಾನವನ್ನು ಪಡೆಯಲು ಸಮರ್ಥರಾಗಿರುತ್ತಾರೋ ಅವರು ಜಗತ್ತಿಗೇ ಮಾರ್ಗದರ್ಶನವನ್ನು ಕೊಡುತ್ತಾರೆ. ಉಳಿದವರು ಅದನ್ನು ಅನುಕರಣೆ ಮಾಡುತ್ತಾರೆ, ಇಲ್ಲವೇ ಅದನ್ನೇ ವರ್ಣರಂಜಿತವಾಗಿ ಹೇಳಿ ಕೇವಲ ಬೋಧಕರೆನಿಸುತ್ತಾರೆ. 

Sunday, March 2, 2014

ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಕಥಾ -೧


 

ಲೇಖನ ಮತ್ತು ಸಂಗ್ರಹ: ಪಿ.ಎಸ್.ರಂಗನಾಥ.

ಓಂಕಾರ ಸಮಿತಿಯು ಮಸ್ಕತ್ ಕನ್ನಡಿಗರ ಮತ್ತು ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಬರುವ ೧೪ ಮಾರ್ಚ್ ೨೦೧೪ (ಫಾಲ್ಗುಣ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಆಶ್ಲೇಷ ನಕ್ಷತ್ರ, ಮೀನ ಸಂಕ್ರಮಣ) ಶುಭಘಳಿಗೆಯಂದು ಆಯೋಜಿಸಲಾಗಿದೆ. ಮಸ್ಕತ್ ನ ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಂಡು ಶ್ರೀ ಸತ್ಯನಾರಾಯಣ ಸ್ವಾಮಿಯ ಕೃಪೆಗೆ ಪಾತ್ರರಾಗಲು ಇದೊಂದು ಒಳ್ಳೆ ಸದಾವಕಾಶವಾಗಿದೆ. 

ಸತ್ಯನಾರಾಯಣ ಸ್ವಾಮಿ ಪೂಜೆಯನ್ನು, ಯಾರೂ ಯಾವಾಗ ಬೇಕಾದರೂ ಮಾಡಬಹುದು. ಸರ್ವರಿಗೂ ಸನ್ಮಂಗಳವನ್ನುಂಟು ಮಾಡುವ ಈ ಪೂಜೆಯ ಬಗೆಗಿನ ಕಥೆಯು ಸ್ಕಂದ ಪುರಾಣ ರೇವಾ ಖಂಡದಲ್ಲಿ ಉಲ್ಲೇಕವಾಗಿದೆ. ಎಲ್ಲ ಪೂಜೆಗಳಂತೆ ಈ ಪೂಜೆಯಲ್ಲೂ ಪ್ರತಿಷ್ಟಾಪನೆ, ಆವಾಹನೆ, ಅಲಂಕಾರ, ಆರತಿ ನೈವೇದ್ಯ, ವಿಸರ್ಜನೆ ಗಳೇ ಇದ್ದರೂ ಇತರ ಪೂಜೆಗಳಿಗಿಂತ ಕೊಂಚ ಭಿನ್ನ. ಸತ್ಯನಾರಾಯಣ ಕಥೆಯು ಐದು ಕಥೆಗಳನ್ನು ಹೊಂದಿದ್ದು ಮೊದಲ ಕಥೆಯಲ್ಲಿ ಸತ್ಯನಾರಾಯಣ ಪೂಜೆಯು ಭೂಲೋಕದಲ್ಲಿ ಪ್ರಚಲಿತ ವಾದುದರ ಬಗ್ಗೆ ಹೇಳಿದರೆ ಇನ್ನಿತರ ನಾಲ್ಕು ಕಥೆಗಳಲ್ಲಿ ನಾಲ್ಕುವರ್ಣದವರು ಈ ಪೂಜೆಯನ್ನು ಆಚರಿಸಿ ಸಿದ್ದಿ ಹೊಂದಿದದರ ವಿಷಯ ತಿಳಿಸುತ್ತದೆ. ಅಂದರೆ ಈ ಪೂಜೆಯು ಬರೀ ಬ್ರಾಹ್ಮಣರಿಗಷ್ಟೇ ಸೀಮಿತವಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿಲಾಗಿದೆ.

ನೈಮಿಷ್ಯಾರಣ್ಯದಲ್ಲಿ ವಾಸಿಸುತಿದ್ದ ಋಷಿಗಳು ಪುರಾಣಗಳನ್ನು ಬಲ್ಲ ಸೂತಪುರಾಣಿಕನನ್ನು ಕುರಿತು ಒಂದು ದಿನ ಮಾನವರ ಹಿತಾರ್ಥವಾಗಿ ಪ್ರಶ್ನಿಸಿದರು. 'ಎಲೈ ಮುನಿಯೇ, ಮಾನವರ ಮನೋಬಯಕೆಗಳು ಅದಾವ ವ್ರತದಿಂದ ಇಲ್ಲವೇ ಅದಾವ ತಪಸ್ಸಿನಿಂದ ಈಡೇರುವುವು?' ಸೂತ ಮಹರ್ಷಿಯು ಅದಕ್ಕೆ ಹೀಗೆ ಉತ್ತರವಿತ್ತನು. 'ಎಲೈ ಋಷಿಗಳೇ, ಇದೇ ಪ್ರಶ್ನೆಯನ್ನು ಮೊದಲು ನಾರದ ಮಹರ್ಷಿಯು, ಶ್ರೀಮನ್ನಾರಾಯಣನನ್ನು ಕೇಳಿದನು. ಅದಕ್ಕೆ ಲೋಕ ರಕ್ಷಕನಾದ ಆ ಭಗವಂತನು, ನಾರದರಿಗೆ ಕೊಟ್ಟ ಉತ್ತರವನ್ನೇ ಈಗ ಹೇಳುವೆನು. ಚಿತ್ತಗೊಟ್ಟು ಕೇಳಿರಿ ಎಂದು ಹೇಳಲು ಉಪಕ್ರಮಿಸಿದನು. ಒಂದು ಸಲ ನಾರದ ಯೋಗಿಯು 'ಪರಾನುಗ್ರಹ ಕಾಂಕ್ಷಯಾ' ಎರಡನೆಯವರಿಗೆ ಹಿತ ಮಾಡಬೇಕೆಂಬ ಬಯಕೆಯಿಂದ ಎಲ್ಲಾ ಲೋಕಗಳನ್ನು ಸಂಚರಿಸುತ್ತಾ, ನಮ್ಮ ಈ ಭೂಲೋಕಕ್ಕೆ ಬಂದರು. ಇಲ್ಲಿಯೂ ತಮ್ಮ ತಮ್ಮ ದುಷ್ಕರ್ಮಗಳಿಗೆ ತಕ್ಕಂತೆ ಹಲವಾರು ನೀಚ ಯೋನಿಗಳಲ್ಲಿ ಜನಿಸಿ, ಬಹು ದುಃಖದಿಂದ ಬಳಲುತ್ತಿರುವುದನ್ನು ಕಂಡು 'ಸಜ್ಜನಸ್ಯ ಹೃದಯ ನವನೀತಂ' - ಬೆಣ್ಣೆಯಂತಹ ಹೃದಯ ಕರಗಿತು. ಇದೆನ್ನಲ್ಲ ನೋಡಿ ಕಳವಳಗೊಂಡರು. ಅದಾವ ಉಪಾಯದಿಂದ ಈ ಜನರ ದುಃಖವು ದೂರವಾಗುವುದು? ಎಂದು ಮನಮುಟ್ಟಿ ಚಿಂತಿಸಿದರು. ಕೊನೆಗೆ ಈ ಬಗ್ಗೆ ವಿಚಾರಿಸುವುದಾಗಿ, ಅಧಿಕಾರವುಳ್ಳ ಸೃಷ್ಠಿ ಸ್ಥಿತಿಯನ್ನು ಕಾಯುವ ಶ್ರೀಮನ್ನಾರಾಯಣನನ್ನು ಕಾಣಲು ವಿಷ್ಣುಲೋಕಕ್ಕೆ ತೆರಳಿದರು. 

ಅಲ್ಲಿ ಚತುರ್ಭುಜನೂ ಸುಂದರನೂ ಆದ ಸದ್ಗುಣೈಶ್ವರ್ಯ ಸಂಪನ್ನನಾದ ಶ್ರೀಮನ್ನಾರಾಯಣನನ್ನು ಕಂಡೊಡನೆಆದರೆ ವೈಕುಂಠಕ್ಕೆ ಬಂದ ಕಾರಣವನ್ನು ಮರೆತು ಭಕ್ತಶ್ರೇಷ್ಠರಾದ ಅವರ ಅಂತಃಕರಣದಲ್ಲಿ ಭಕ್ತಿರಸವು ಉಕ್ಕೇರಿತು. ದೇವ ದೇವೇಂದ್ರನಾದ ಆತನನ್ನು ಸ್ತುತಿಸತೊಡಗಿದರು. ಕಾರಣವಿಲ್ಲದೆ ಭೇಟಿಮಾಡದ ನಾರದನನ್ನು ಶ್ರೀ ಮನ್ನಾರಾಯಣ ನೋಡಿ ಮುಗುಳ್ನಗುತ್ತ ಬಂದ ಕಾರಣವನ್ನು ಕೇಳುತ್ತಾನೆ, 

ಸ್ತೋತ್ರ: ನಮೋ ವಾಙ್ಮನ ಸಾತೀತ ರೂಪಾಯಂತ ಶಕ್ತಿಯೇ ಆದಿಮಧ್ಯಾಂತ ಹಿನಾ ಗುಣಾತ್ಮನೇ ಸವೇಷಮಿಥಿ ಭೂತಾಯ | 

ಭಕ್ತಿ ಮೂರ್ತಿಯೇ ಸರ್ವ ಸ್ವಾಮಿಯೇ ನೀನು ಮನಸ್ಸು ಮಾತುಗಳಿಗೆ ನಿಲುಕದ ರೂಪವುಳ್ಳವನು. ನೆಲೆ ಇಲ್ಲದ ಶಕ್ತಿವಂತನು. ಹುಟ್ಟು ಬೆಳೆ ಸಾವುಗಳಿಂದ ಹೀನನು ಅಥವಾ ಮೊದಲು ಕೊನೆಗಳಿಲ್ಲದ್ದು. ಗುಣಗಳಿಂದ ರಹಿತನು ನಾಂದಿಗುಣಗಳಿಂದ ಅರ್ಥವುಳ್ಳವನು. ನಿರ್ಗುಣನಾದ ನೀನು ಸುಗುಣ ರೂಪ ತಳೆದಾಗ ಎಲ್ಲಾ ಭೂತಮಾತ್ರ ಸೃಷ್ಠಿಗೆ ಕಾರಣನಾದ ನೀನು ಸರ್ವಾಂತರ್ಯಾಮಿ. ನಿನ್ನನ್ನೇ ನೆರೆ ತುಂಬಿದ ಭಕ್ತರ ಪಾಪಕಾರ್ಯಗಳನ್ನು ನಾಶ ಮಾಡುವವನು ಆಗಿರುವಿ. ನಾರದರ ಪರಹಿತ ಭಾವಪೂರ್ಣವೂ ಆದ ಸ್ತೋತ್ರಗಳನ್ನು ಕೇಳಿ ಶ್ರೀ ವಿಷ್ಣುವು 'ಎಲೈ ಸಾಧುವೇ, ನೀನು ಇಲ್ಲಿಗೆ ಯಾವ ಕಾರ್ಯಕ್ಕಾಗಿ ಬಂದಿರುವೆ? ನಿನ್ನ ಬಯಕೆ ಏನು? ಹೇಳು. ಅದೆಲ್ಲವನ್ನೂ ನಾನು ಪೂರೈಸುವೆ' ಎಂದು ಹೇಳಿದನು. 'ಒಡೆಯನೇ, ಮೃತ್ಯುಲೋಕದ ಜನತೆ ಎಲ್ಲವೂ ಹಲವು ಬಗೆಯ ದುಃಖವನ್ನು ಅನುಭವಿಸುತ್ತಿರುವರು. ಆ ಜನರ ದುಃಖವನ್ನು ಹೋಗಲಾಡಿಸುವುದಕ್ಕಾಗಿ ನೀನು ನಮಗೆ ದಾರಿ ತೋರಿಸ ಬೇಕೆಂದು ಕೇಳಿ ಕೊಂಡನು. 

ಶ್ರೀ ಭಗವಂತನು ನಾರದನ ಪರಹಿತ ಬುದ್ಧಿಯನ್ನರಿತು 'ವತ್ಸ ನಾರದಾ, ಜನರ ಮೇಲೆ ಅನುಗ್ರಹ ಮಾಡಬೇಕೆಂಬ ಬಯಕೆಯಿಂದ ಒಳ್ಳೆಯ ಪ್ರಶ್ನೆಯನ್ನು ಕೇಳಿದೆ. ಏನು ಮಾಡುವುದಂತ ದುಃಖ ಮುಕ್ತರಾಗುವರೆಂಬುದನ್ನು ಹೇಳುವೆ. ಕೇಳು. ಅದೊಂದು ಮಹತ್ಪುಣ್ಯಕರವಾದ ಸತ್ಯನಾರಾಯಣ ವ್ರತವು. ಅದು ಸ್ವರ್ಗ ಮೃತ್ಯುಲೋಕದಲ್ಲಿ ದುರ್ಲಭವಾದುದು. ವತ್ಸಾ, ಕೇವಲ ಅದು ನಿನ್ನ ಮೇಲಿನ ಪ್ರೀತಿಯ ಮೂಲಕ ಗುಪ್ತವಾಗಿದ್ದರೂ ಪ್ರಕಟಗೊಳಿಸುವೆ. ಅದು ಶ್ರೀ ಸತ್ಯನಾರಾಯಣ ಎಂಬ ವ್ರತವು. ಅದನ್ನು ಒಳ್ಳೆಯ ವಿಧಾನಪೂರ್ವಕವಾಗಿ ಮಾಡುವುದರಿಂದ ಇಹದಲ್ಲಿನ ದುಃಖವೆಲ್ಲಾ ನಾಶವಾಗಿ ಸುಖ ಉಂಟಾಗುವುದು ಮತ್ತು ಮುಂದೆ ಮರಣಾನಂತರ ಮೋಕ್ಷವನ್ನು ಹೊಂದುವನು.

ಭಗವಂತನ ಮಾತುಗಳನ್ನು ಕೇಳಿ ನಾರದ ಮಹರ್ಷಿಯು 'ಕೀ ಫಲಂ ಕಿಂ ವಿಧಾನಂ ಚ ಕೃತಂ ಕೇನ್ವರ ತವ ವ್ರತಂ'. ಈ ವ್ರತಕ್ಕೆ ಫಲವೆನಿದೆ? ಇದನ್ನು ಮಾಡುವ ವಿಧಾನ ಹೇಗೆ? ಮೊದಲು ಯಾರು ಇದನ್ನು ಮಾಡಿದ್ದರು? ಮತ್ತು 'ಕದಾ ಕಾರ್ಯಂ ದ ವ್ರತಂ' ವ್ರತ ಮಾಡಲಿಕ್ಕೆ ಕಾಲವು ಯಾವುದು? ಇದನ್ನು ವಿಸ್ತಾರವಾಗಿ ಹೇಳಬೇಕೆಂದು ಕೇಳಿದನು. ಅದಕ್ಕೆ ಭಗವಂತನು - 'ಈ ವ್ರತಾಚರಣೆಯಿಂದ ದುಃಖಗಳೆಲ್ಲಾ ನಾಶವಾಗುವುದು. ಧನ ಮತ್ತು ಧಾನ್ಯಗಳು ಸಮೃದ್ಧಿಯಾಗುವುದು. ಅಲ್ಲದೇ 'ಸೌಭಾಗ್ಯಂ ಸಂತತಿಕರಂ ಸರ್ವತ್ರ ವಿಜಯ ಪ್ರದಂ. ಸೌಭಾಗ್ಯವನ್ನು, ಸಂತತಿಯನ್ನು ಕೊಡುವುದು. ಎಲ್ಲಾ ಕಾರ್ಯಗಳಲ್ಲೂ ಗೆಲುವೇ ದೊರಕುವುದು. ಶ್ರದ್ದಾ ಭಕ್ತಿಯಿಂದ ಸತ್ಯನಾರಾಯಣ ಪೂಜೆಯನ್ನು ಮಾಡುವುದರಿಂದ ಸಕಲ ಕಷ್ಟಗಳೂ ನಿವಾರಣೆಯಾಗಿ ಭಕ್ತನು ಅಷ್ಟೈಶ್ವರ್ಯಗಳಿಂದ ಕೂಡಿದವನಾಗಿ ಸುಖವಾಗಿ ಬಾಳಿ ಸದ್ಗತಿಯನ್ನೂ ಹೊಂದುತ್ತಾನೆ. ಪೂಜಾ ವಿಧಾನವು ಸರಳವಾಗಿದ್ದು ಪೂಜಾ ನಂತರ ಪ್ರಸಾದ ಸ್ವೀಕಾರ ಮಾಡಲೇಬೇಕು. ಈ ಪೂಜೆಯನ್ನು ಮಾಡುವವರ ಮನೆಗೆ ಕರೆಯದೇ ಹೋದರೂ ಅಡ್ಡಿ ಇಲ್ಲ. 

ಯಾವ ಕಾಲ, ಯಾವ ದಿನದಲ್ಲಾದರೂ ಶ್ರದ್ಧೆ, ಭಕ್ತಿಯಿಂದ ಈ ಕರಟವನ್ನು ಮಾಡಬಹುದು. ಧರ್ಮ ತತ್ಪರನಾಗಿ ಬ್ರಾಹ್ಮಣರಿಂದ ಕೂಡಿಕೊಂಡು ಈ ಸತ್ಯನಾರಾಯಣ ದೇವನನ್ನು ಸಾಯಂಕಾಲದ ಸಮಯಕ್ಕೆ ಪೂಜಿಸಬೇಕು. ಹುಣ್ಣಿಮೆಯ ದಿನ ಅಥವಾ ಸಂಕ್ರಾಂತಿಯ ದಿನವು ಪೂಜೆಗೆ ಪ್ರಶಸ್ತವಾದ ದಿನ. ಉತ್ತಮವಾದ ಸಪಾತಪಕ್ಷ ನೈವೇದ್ಯವನ್ನು ಭಕ್ತಿಯಿಂದ ಕೊಡಬೇಕು. ಭಕ್ಷ್ಯವೆಂದರೆ ಬಾಳೆಹಣ್ಣು, ತುಪ್ಪ, ಹಾಲು ಮತ್ತು ಗೋಧಿಯ ಸಜ್ಜಿಗೆ ದೊರೆಯದಿದ್ದಲ್ಲಿ ಅಕ್ಕಿಯ ಸಜ್ಜಿಗೆಯನ್ನೂ ಸಕ್ಕರೆ ದೊರೆಯದಿದ್ದಲ್ಲಿ ಬೆಲ್ಲವನ್ನೂ ಅಭಾವಶಾಲಿ ಚೂರ್ಣಂ ಯಾ ಚರ್ಕಣ ಚ ಡಸ್ತಬಾ' ಉಪಯೋಗಿಸಬೇಕು. ಎಲ್ಲಾ ಪದಾರ್ಥಗಳನ್ನು "ಸಪಾದ" ಅಂದರೆ ಯಾವುದೊಂದು ಪ್ರಮಾಣ ಐದುಮಡಿ ಮಾಡಿ ನಿವೇದಿಸಬೇಕು. ಅನಂತರ ತನ್ನ ಆಪ್ತೇಷ್ಠರುಗಳಿಂದ ಕೂಡಿ ಬ್ರಾಹ್ಮಣರಿಗೆ ಊಟಕ್ಕೆ ಹಾಕಿ ತಾಂಬೂಲ ದಕ್ಷಿಣೆಗಳನ್ನು ಕೊಡಬೇಕು. ರಾತ್ರಿ ಎಲ್ಲಾ ನೃತ್ಯ ಗಾನಾದಿಗಳಿಂದ ಹೊತ್ತು ಕಳೆದು ಶ್ರೀ ಸತ್ಯನಾರಾಯಣನನ್ನು ಮನಮುಟ್ಟಿ ಸ್ಮರಿಸುತ್ತಾ ಮನೆಗೆ ಹೋಗಬೇಕು. ಇಂತು ವ್ರತವನ್ನು ಆಚರಿಸಿದರೆ, ಮನುಜನ ಮನೋರಥವು ಸಿದ್ಧಿಸುವುದು. ವಿಶೇಷವಾಗಿ ಈ ವ್ರತವು ಕಲಿಯುಗದಲ್ಲಿ ಬಹು ಬೇಗನೆ ಫಲವನ್ನು ಕೊಡುವಂತಹದಾಗಿದೆ. ಹೀಗೆಂದು ಭಗವಂತನು ನಾರದರಿಗೆ ಹೇಳಿದನು. 

ಇದೇ ಶ್ರೀ ಸ್ಕಂದ ಪುರಾಣ ರೇವಾ ಖಂಡದ ಸತ್ಯನಾರಾಯಣ ಕಥಾಯೋ ಪ್ರಥಮಾಧ್ಯಾಯಂ ಸಮಾಪ್ತಿರಸ್ತು.

ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ


--- *** ---

Thursday, February 27, 2014

ದಯಾಮಯೀ ಈ ಶಿವಾ!!


ಲೇಖಕರು: ರವಿಪ್ರಕಾಶ ಎ. ಎಸ್. 


ಎಲ್ಲರಿಗೂ ನಮಸ್ಕಾರ,

ಧನ್ಯವಾದಗಳು ಓಂಕಾರ ಸಮಿತಿಗೆ. ನಿಮಗೂ ಸಹ ಈ ಮಹಾಶಿವರಾತ್ರಿಯ ಸಮಯದಲ್ಲಿ ಶುಭವನ್ನು ಕೊರುತ್ತೇನೆ. 

ಈ ಶುಭದಿನದಂದು ಒಂದು ವಿಷಯ ಹೇಳಲು ಇಷ್ಟಪಡುತ್ತೇನೆ - ಬೂದಿಬಡಕ ಶಿವನು ಸಹ ಕಷ್ಟದಲ್ಲಿ ಇರುವವನೇ, ಅಂದರೆ ಅವನ ವಾಸ ರುದ್ರಭೂಮಿ - ಬೆಟ್ಟಗುಡ್ಡಗಳ ನಡುವೆ, ಅವನ ಅಭರಣ ನಾಗ (ಹಾವು), ಅವನ ಮೈಯೆಲ್ಲ ಬೂದಿ (ಭಸ್ಮ) ಲೇಪಿತ, ಜಟಾದಾರಿ (ಕಿರೀಟವೇ ಇಲ್ಲದವನು), ಚರ್ಮವನ್ನೇ ಬಟ್ಟೆಯಾಗಿ ಸುತ್ತಿಕೊಂಡವ, ಅವನ ಪೂಜೆ ಲಿಂಗರೂಪಿತ ವಿಗ್ರಹಕ್ಕೆ - ಹೀಗಿರುವಾಗ ಅವನಿಗೆಲ್ಲಿದೆ ಸುಖದ ಮತ್ತು ವೈಭವದ ಪೀಠ? ಹಾಗಾಗಿ ಮಾನವನ ಸಂಕಷ್ಟಗಳು ಭಸ್ಮಲೇಪಿತ ಶಿವನಿಗೆ ಗೊತ್ತಿರುವಂತ ವಿಷಯವೇ. ಆವನು ಇರುಹುದೆ ತನ್ನಲ್ಲಿ ಭಕ್ತಿಯಿಂದ ನೊಂದು ಬರುವ ಭಕ್ತಾದಿಗಳನ್ನು ಕಾಪಾಡಲು. 

ಅದಕ್ಕೆ ಅವನನ್ನು ಮನಸ್ಸು ಎಂಬ ದೇಗುಲದಲ್ಲಿ, ಭಕ್ತಿ ಎಂಬ ಪೀಠದಲ್ಲಿ ಕುಳ್ಳಿರಿಸಿ, ಏಕಾಗ್ರತೆಯೆಂಬ ದೀಪದಿಂದ, ಮೂರು ಎಲೆಯನ್ನು ಹೊಂದಿರುವ ಬಿಲ್ವಪತ್ರೆಯಿಂದ ಪೂಜಿಸಿದರೆ ಒಲಿಯುವನು ಆ ನಮ್ಮ ಶಿವಪ್ಪ. ಆದ್ದರಿಂದ ಈಶ್ವರನು ಭಕ್ತರ ದಯಾಸಿಂಧು. ಅವನಲ್ಲಿ ಭಕ್ತಿಯಿಂದ ಬೇಡಿದರೆ ಶೀಘ್ರವಾಗಿ ವರವನ್ನ ದಯಪಾಲಿಸುವಂತಹ ಪರಮ ಈಶ್ವರ ಪರಮೇಶ್ವರನು. 

ಈ ಒಂದು ಶುಭದಿನದಲ್ಲಿ ಆ ಶಿವನಲ್ಲಿ ಬೇಡುಹುದೇನೆಂದರೆ, ಇಲ್ಲಿರುವ ಎಲ್ಲ ಭಕ್ತಾದಿಗಳನ್ನು ರಕ್ಷಣೆ ಮಾಡಿ ಅನುಗ್ರಹಿಸು ತಂದೆ ಎಂದು. ಎಲ್ಲ ಅವರವರ ಊರು, ಮನೆ, ನೆಂಟರು, ಇಷ್ಟರು, ಮಠಾದಿಗಳನ್ನ ಬಿಟ್ಟು ಗೊತ್ತು ಗುರಿಯಿಲ್ಲದ ಈ ಹೊರದೇಶದಲ್ಲಿ ಬಂದು ನಿಷ್ಠೆಯಿಂದ ಕಾರ್ಯ ಮಾಡಿ ಅವರವರ ಸಂಸಾರ ಸಾಗಿಸುತ್ತಿರುವಂತ ಎಲ್ಲರಿಗೂ ಆ ಈಶ್ವರನು ಈ ಒಂದು ಶುಭದಿನದಂದು ಸಂತೋಷವನ್ನು, ನೆಮ್ಮದಿಯನ್ನು, ಅರೋಗ್ಯವನ್ನು, ಆಯುಷ್ಯವನ್ನು, ಐಶ್ವರ್ಯಾದಿಗಳನ್ನು ದಯಪಾಲಿಸಲಿ ಅದರೊಂದಿಗೆ ಈ ಹೊರದೇಶದಲ್ಲಿ ನಮ್ಮನ್ನೆಲ್ಲಾ ರಕ್ಷಣೆ ಮಾಡೆಂದು ಮನಃಪೂರ್ವಕವಾಗಿ ಆ ಪರಮೇಶ್ವರನಲ್ಲಿ ಕೈಮುಗಿದು ಬೇಡೋಣ.

ಎಲ್ಲರಿಗೂ ಶುಭವಾಗಲಿ. 

ಓಂ ನಮಃ ಶಿವಾಯ ಓಂ.....  
ಓಂ ನಮಃ ಶಿವಾಯ ಓಂ.....  
ಓಂ ನಮಃ ಶಿವಾಯ ಓಂ.....  
ಓಂ ನಮಃ ಶಿವಾಯ ಓಂ.....  
ಓಂ ನಮಃ ಶಿವಾಯ ಓಂ.....  

ಎಂಬ ಈ ಪಂಚಾಕ್ಷರೀ ಮಹಾಮಂತ್ರವನ್ನು ಪ್ರತಿದಿನ *೧೦೮* ಸಲ ಯಾರು ಜಪಿಸುತ್ತಾರೋ ಅವರಿಗೆ ಆ ಶಿವನ ಅನುಗ್ರಹ ಸದಾಕಾಲ ಇರುತ್ತದೆ ಇದರಲ್ಲಿ ಸಂಶಯ ಬೇಡ.

ಶುಭಂ. ಎಲ್ಲರಿಗೂ ಒಳ್ಳೆಯದಾಗಲಿ.

ನಮಸ್ಕಾರ

ಇಂತಿ ನಿಮ್ಮವ,
ರವಿಪ್ರಕಾಶ. ಏ. ಎಸ್.