ಲೇಖನ ಮತ್ತು ಸಂಗ್ರಹ: ಪಿ.ಎಸ್.ರಂಗನಾಥ.
ಓಂಕಾರ ಸಮಿತಿಯು ಮಸ್ಕತ್ ಕನ್ನಡಿಗರ ಮತ್ತು ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಬರುವ ೧೪ ಮಾರ್ಚ್ ೨೦೧೪ (ಫಾಲ್ಗುಣ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಆಶ್ಲೇಷ ನಕ್ಷತ್ರ, ಮೀನ ಸಂಕ್ರಮಣ) ಶುಭಘಳಿಗೆಯಂದು ಆಯೋಜಿಸಲಾಗಿದೆ. ಮಸ್ಕತ್ ನ ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಂಡು ಶ್ರೀ ಸತ್ಯನಾರಾಯಣ ಸ್ವಾಮಿಯ ಕೃಪೆಗೆ ಪಾತ್ರರಾಗಲು ಇದೊಂದು ಒಳ್ಳೆ ಸದಾವಕಾಶವಾಗಿದೆ.
ಸತ್ಯನಾರಾಯಣ ಸ್ವಾಮಿ ಪೂಜೆಯನ್ನು, ಯಾರೂ ಯಾವಾಗ ಬೇಕಾದರೂ ಮಾಡಬಹುದು. ಸರ್ವರಿಗೂ ಸನ್ಮಂಗಳವನ್ನುಂಟು ಮಾಡುವ ಈ ಪೂಜೆಯ ಬಗೆಗಿನ ಕಥೆಯು ಸ್ಕಂದ ಪುರಾಣ ರೇವಾ ಖಂಡದಲ್ಲಿ ಉಲ್ಲೇಕವಾಗಿದೆ. ಎಲ್ಲ ಪೂಜೆಗಳಂತೆ ಈ ಪೂಜೆಯಲ್ಲೂ ಪ್ರತಿಷ್ಟಾಪನೆ, ಆವಾಹನೆ, ಅಲಂಕಾರ, ಆರತಿ ನೈವೇದ್ಯ, ವಿಸರ್ಜನೆ ಗಳೇ ಇದ್ದರೂ ಇತರ ಪೂಜೆಗಳಿಗಿಂತ ಕೊಂಚ ಭಿನ್ನ. ಸತ್ಯನಾರಾಯಣ ಕಥೆಯು ಐದು ಕಥೆಗಳನ್ನು ಹೊಂದಿದ್ದು ಮೊದಲ ಕಥೆಯಲ್ಲಿ ಸತ್ಯನಾರಾಯಣ ಪೂಜೆಯು ಭೂಲೋಕದಲ್ಲಿ ಪ್ರಚಲಿತ ವಾದುದರ ಬಗ್ಗೆ ಹೇಳಿದರೆ ಇನ್ನಿತರ ನಾಲ್ಕು ಕಥೆಗಳಲ್ಲಿ ನಾಲ್ಕುವರ್ಣದವರು ಈ ಪೂಜೆಯನ್ನು ಆಚರಿಸಿ ಸಿದ್ದಿ ಹೊಂದಿದದರ ವಿಷಯ ತಿಳಿಸುತ್ತದೆ. ಅಂದರೆ ಈ ಪೂಜೆಯು ಬರೀ ಬ್ರಾಹ್ಮಣರಿಗಷ್ಟೇ ಸೀಮಿತವಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿಲಾಗಿದೆ.
ನೈಮಿಷ್ಯಾರಣ್ಯದಲ್ಲಿ ವಾಸಿಸುತಿದ್ದ ಋಷಿಗಳು ಪುರಾಣಗಳನ್ನು ಬಲ್ಲ ಸೂತಪುರಾಣಿಕನನ್ನು ಕುರಿತು ಒಂದು ದಿನ ಮಾನವರ ಹಿತಾರ್ಥವಾಗಿ ಪ್ರಶ್ನಿಸಿದರು. 'ಎಲೈ ಮುನಿಯೇ, ಮಾನವರ ಮನೋಬಯಕೆಗಳು ಅದಾವ ವ್ರತದಿಂದ ಇಲ್ಲವೇ ಅದಾವ ತಪಸ್ಸಿನಿಂದ ಈಡೇರುವುವು?' ಸೂತ ಮಹರ್ಷಿಯು ಅದಕ್ಕೆ ಹೀಗೆ ಉತ್ತರವಿತ್ತನು. 'ಎಲೈ ಋಷಿಗಳೇ, ಇದೇ ಪ್ರಶ್ನೆಯನ್ನು ಮೊದಲು ನಾರದ ಮಹರ್ಷಿಯು, ಶ್ರೀಮನ್ನಾರಾಯಣನನ್ನು ಕೇಳಿದನು. ಅದಕ್ಕೆ ಲೋಕ ರಕ್ಷಕನಾದ ಆ ಭಗವಂತನು, ನಾರದರಿಗೆ ಕೊಟ್ಟ ಉತ್ತರವನ್ನೇ ಈಗ ಹೇಳುವೆನು. ಚಿತ್ತಗೊಟ್ಟು ಕೇಳಿರಿ ಎಂದು ಹೇಳಲು ಉಪಕ್ರಮಿಸಿದನು. ಒಂದು ಸಲ ನಾರದ ಯೋಗಿಯು 'ಪರಾನುಗ್ರಹ ಕಾಂಕ್ಷಯಾ' ಎರಡನೆಯವರಿಗೆ ಹಿತ ಮಾಡಬೇಕೆಂಬ ಬಯಕೆಯಿಂದ ಎಲ್ಲಾ ಲೋಕಗಳನ್ನು ಸಂಚರಿಸುತ್ತಾ, ನಮ್ಮ ಈ ಭೂಲೋಕಕ್ಕೆ ಬಂದರು. ಇಲ್ಲಿಯೂ ತಮ್ಮ ತಮ್ಮ ದುಷ್ಕರ್ಮಗಳಿಗೆ ತಕ್ಕಂತೆ ಹಲವಾರು ನೀಚ ಯೋನಿಗಳಲ್ಲಿ ಜನಿಸಿ, ಬಹು ದುಃಖದಿಂದ ಬಳಲುತ್ತಿರುವುದನ್ನು ಕಂಡು 'ಸಜ್ಜನಸ್ಯ ಹೃದಯ ನವನೀತಂ' - ಬೆಣ್ಣೆಯಂತಹ ಹೃದಯ ಕರಗಿತು. ಇದೆನ್ನಲ್ಲ ನೋಡಿ ಕಳವಳಗೊಂಡರು. ಅದಾವ ಉಪಾಯದಿಂದ ಈ ಜನರ ದುಃಖವು ದೂರವಾಗುವುದು? ಎಂದು ಮನಮುಟ್ಟಿ ಚಿಂತಿಸಿದರು. ಕೊನೆಗೆ ಈ ಬಗ್ಗೆ ವಿಚಾರಿಸುವುದಾಗಿ, ಅಧಿಕಾರವುಳ್ಳ ಸೃಷ್ಠಿ ಸ್ಥಿತಿಯನ್ನು ಕಾಯುವ ಶ್ರೀಮನ್ನಾರಾಯಣನನ್ನು ಕಾಣಲು ವಿಷ್ಣುಲೋಕಕ್ಕೆ ತೆರಳಿದರು.
ಅಲ್ಲಿ ಚತುರ್ಭುಜನೂ ಸುಂದರನೂ ಆದ ಸದ್ಗುಣೈಶ್ವರ್ಯ ಸಂಪನ್ನನಾದ ಶ್ರೀಮನ್ನಾರಾಯಣನನ್ನು ಕಂಡೊಡನೆಆದರೆ ವೈಕುಂಠಕ್ಕೆ ಬಂದ ಕಾರಣವನ್ನು ಮರೆತು ಭಕ್ತಶ್ರೇಷ್ಠರಾದ ಅವರ ಅಂತಃಕರಣದಲ್ಲಿ ಭಕ್ತಿರಸವು ಉಕ್ಕೇರಿತು. ದೇವ ದೇವೇಂದ್ರನಾದ ಆತನನ್ನು ಸ್ತುತಿಸತೊಡಗಿದರು. ಕಾರಣವಿಲ್ಲದೆ ಭೇಟಿಮಾಡದ ನಾರದನನ್ನು ಶ್ರೀ ಮನ್ನಾರಾಯಣ ನೋಡಿ ಮುಗುಳ್ನಗುತ್ತ ಬಂದ ಕಾರಣವನ್ನು ಕೇಳುತ್ತಾನೆ,
ಸ್ತೋತ್ರ: ನಮೋ ವಾಙ್ಮನ ಸಾತೀತ ರೂಪಾಯಂತ ಶಕ್ತಿಯೇ ಆದಿಮಧ್ಯಾಂತ ಹಿನಾ ಗುಣಾತ್ಮನೇ ಸವೇಷಮಿಥಿ ಭೂತಾಯ |
ಭಕ್ತಿ ಮೂರ್ತಿಯೇ ಸರ್ವ ಸ್ವಾಮಿಯೇ ನೀನು ಮನಸ್ಸು ಮಾತುಗಳಿಗೆ ನಿಲುಕದ ರೂಪವುಳ್ಳವನು. ನೆಲೆ ಇಲ್ಲದ ಶಕ್ತಿವಂತನು. ಹುಟ್ಟು ಬೆಳೆ ಸಾವುಗಳಿಂದ ಹೀನನು ಅಥವಾ ಮೊದಲು ಕೊನೆಗಳಿಲ್ಲದ್ದು. ಗುಣಗಳಿಂದ ರಹಿತನು ನಾಂದಿಗುಣಗಳಿಂದ ಅರ್ಥವುಳ್ಳವನು. ನಿರ್ಗುಣನಾದ ನೀನು ಸುಗುಣ ರೂಪ ತಳೆದಾಗ ಎಲ್ಲಾ ಭೂತಮಾತ್ರ ಸೃಷ್ಠಿಗೆ ಕಾರಣನಾದ ನೀನು ಸರ್ವಾಂತರ್ಯಾಮಿ. ನಿನ್ನನ್ನೇ ನೆರೆ ತುಂಬಿದ ಭಕ್ತರ ಪಾಪಕಾರ್ಯಗಳನ್ನು ನಾಶ ಮಾಡುವವನು ಆಗಿರುವಿ. ನಾರದರ ಪರಹಿತ ಭಾವಪೂರ್ಣವೂ ಆದ ಸ್ತೋತ್ರಗಳನ್ನು ಕೇಳಿ ಶ್ರೀ ವಿಷ್ಣುವು 'ಎಲೈ ಸಾಧುವೇ, ನೀನು ಇಲ್ಲಿಗೆ ಯಾವ ಕಾರ್ಯಕ್ಕಾಗಿ ಬಂದಿರುವೆ? ನಿನ್ನ ಬಯಕೆ ಏನು? ಹೇಳು. ಅದೆಲ್ಲವನ್ನೂ ನಾನು ಪೂರೈಸುವೆ' ಎಂದು ಹೇಳಿದನು. 'ಒಡೆಯನೇ, ಮೃತ್ಯುಲೋಕದ ಜನತೆ ಎಲ್ಲವೂ ಹಲವು ಬಗೆಯ ದುಃಖವನ್ನು ಅನುಭವಿಸುತ್ತಿರುವರು. ಆ ಜನರ ದುಃಖವನ್ನು ಹೋಗಲಾಡಿಸುವುದಕ್ಕಾಗಿ ನೀನು ನಮಗೆ ದಾರಿ ತೋರಿಸ ಬೇಕೆಂದು ಕೇಳಿ ಕೊಂಡನು.
ಶ್ರೀ ಭಗವಂತನು ನಾರದನ ಪರಹಿತ ಬುದ್ಧಿಯನ್ನರಿತು 'ವತ್ಸ ನಾರದಾ, ಜನರ ಮೇಲೆ ಅನುಗ್ರಹ ಮಾಡಬೇಕೆಂಬ ಬಯಕೆಯಿಂದ ಒಳ್ಳೆಯ ಪ್ರಶ್ನೆಯನ್ನು ಕೇಳಿದೆ. ಏನು ಮಾಡುವುದಂತ ದುಃಖ ಮುಕ್ತರಾಗುವರೆಂಬುದನ್ನು ಹೇಳುವೆ. ಕೇಳು. ಅದೊಂದು ಮಹತ್ಪುಣ್ಯಕರವಾದ ಸತ್ಯನಾರಾಯಣ ವ್ರತವು. ಅದು ಸ್ವರ್ಗ ಮೃತ್ಯುಲೋಕದಲ್ಲಿ ದುರ್ಲಭವಾದುದು. ವತ್ಸಾ, ಕೇವಲ ಅದು ನಿನ್ನ ಮೇಲಿನ ಪ್ರೀತಿಯ ಮೂಲಕ ಗುಪ್ತವಾಗಿದ್ದರೂ ಪ್ರಕಟಗೊಳಿಸುವೆ. ಅದು ಶ್ರೀ ಸತ್ಯನಾರಾಯಣ ಎಂಬ ವ್ರತವು. ಅದನ್ನು ಒಳ್ಳೆಯ ವಿಧಾನಪೂರ್ವಕವಾಗಿ ಮಾಡುವುದರಿಂದ ಇಹದಲ್ಲಿನ ದುಃಖವೆಲ್ಲಾ ನಾಶವಾಗಿ ಸುಖ ಉಂಟಾಗುವುದು ಮತ್ತು ಮುಂದೆ ಮರಣಾನಂತರ ಮೋಕ್ಷವನ್ನು ಹೊಂದುವನು.
ಭಗವಂತನ ಮಾತುಗಳನ್ನು ಕೇಳಿ ನಾರದ ಮಹರ್ಷಿಯು 'ಕೀ ಫಲಂ ಕಿಂ ವಿಧಾನಂ ಚ ಕೃತಂ ಕೇನ್ವರ ತವ ವ್ರತಂ'. ಈ ವ್ರತಕ್ಕೆ ಫಲವೆನಿದೆ? ಇದನ್ನು ಮಾಡುವ ವಿಧಾನ ಹೇಗೆ? ಮೊದಲು ಯಾರು ಇದನ್ನು ಮಾಡಿದ್ದರು? ಮತ್ತು 'ಕದಾ ಕಾರ್ಯಂ ದ ವ್ರತಂ' ವ್ರತ ಮಾಡಲಿಕ್ಕೆ ಕಾಲವು ಯಾವುದು? ಇದನ್ನು ವಿಸ್ತಾರವಾಗಿ ಹೇಳಬೇಕೆಂದು ಕೇಳಿದನು. ಅದಕ್ಕೆ ಭಗವಂತನು - 'ಈ ವ್ರತಾಚರಣೆಯಿಂದ ದುಃಖಗಳೆಲ್ಲಾ ನಾಶವಾಗುವುದು. ಧನ ಮತ್ತು ಧಾನ್ಯಗಳು ಸಮೃದ್ಧಿಯಾಗುವುದು. ಅಲ್ಲದೇ 'ಸೌಭಾಗ್ಯಂ ಸಂತತಿಕರಂ ಸರ್ವತ್ರ ವಿಜಯ ಪ್ರದಂ. ಸೌಭಾಗ್ಯವನ್ನು, ಸಂತತಿಯನ್ನು ಕೊಡುವುದು. ಎಲ್ಲಾ ಕಾರ್ಯಗಳಲ್ಲೂ ಗೆಲುವೇ ದೊರಕುವುದು. ಶ್ರದ್ದಾ ಭಕ್ತಿಯಿಂದ ಸತ್ಯನಾರಾಯಣ ಪೂಜೆಯನ್ನು ಮಾಡುವುದರಿಂದ ಸಕಲ ಕಷ್ಟಗಳೂ ನಿವಾರಣೆಯಾಗಿ ಭಕ್ತನು ಅಷ್ಟೈಶ್ವರ್ಯಗಳಿಂದ ಕೂಡಿದವನಾಗಿ ಸುಖವಾಗಿ ಬಾಳಿ ಸದ್ಗತಿಯನ್ನೂ ಹೊಂದುತ್ತಾನೆ. ಪೂಜಾ ವಿಧಾನವು ಸರಳವಾಗಿದ್ದು ಪೂಜಾ ನಂತರ ಪ್ರಸಾದ ಸ್ವೀಕಾರ ಮಾಡಲೇಬೇಕು. ಈ ಪೂಜೆಯನ್ನು ಮಾಡುವವರ ಮನೆಗೆ ಕರೆಯದೇ ಹೋದರೂ ಅಡ್ಡಿ ಇಲ್ಲ.
ಯಾವ ಕಾಲ, ಯಾವ ದಿನದಲ್ಲಾದರೂ ಶ್ರದ್ಧೆ, ಭಕ್ತಿಯಿಂದ ಈ ಕರಟವನ್ನು ಮಾಡಬಹುದು. ಧರ್ಮ ತತ್ಪರನಾಗಿ ಬ್ರಾಹ್ಮಣರಿಂದ ಕೂಡಿಕೊಂಡು ಈ ಸತ್ಯನಾರಾಯಣ ದೇವನನ್ನು ಸಾಯಂಕಾಲದ ಸಮಯಕ್ಕೆ ಪೂಜಿಸಬೇಕು. ಹುಣ್ಣಿಮೆಯ ದಿನ ಅಥವಾ ಸಂಕ್ರಾಂತಿಯ ದಿನವು ಪೂಜೆಗೆ ಪ್ರಶಸ್ತವಾದ ದಿನ. ಉತ್ತಮವಾದ ಸಪಾತಪಕ್ಷ ನೈವೇದ್ಯವನ್ನು ಭಕ್ತಿಯಿಂದ ಕೊಡಬೇಕು. ಭಕ್ಷ್ಯವೆಂದರೆ ಬಾಳೆಹಣ್ಣು, ತುಪ್ಪ, ಹಾಲು ಮತ್ತು ಗೋಧಿಯ ಸಜ್ಜಿಗೆ ದೊರೆಯದಿದ್ದಲ್ಲಿ ಅಕ್ಕಿಯ ಸಜ್ಜಿಗೆಯನ್ನೂ ಸಕ್ಕರೆ ದೊರೆಯದಿದ್ದಲ್ಲಿ ಬೆಲ್ಲವನ್ನೂ ಅಭಾವಶಾಲಿ ಚೂರ್ಣಂ ಯಾ ಚರ್ಕಣ ಚ ಡಸ್ತಬಾ' ಉಪಯೋಗಿಸಬೇಕು. ಎಲ್ಲಾ ಪದಾರ್ಥಗಳನ್ನು "ಸಪಾದ" ಅಂದರೆ ಯಾವುದೊಂದು ಪ್ರಮಾಣ ಐದುಮಡಿ ಮಾಡಿ ನಿವೇದಿಸಬೇಕು. ಅನಂತರ ತನ್ನ ಆಪ್ತೇಷ್ಠರುಗಳಿಂದ ಕೂಡಿ ಬ್ರಾಹ್ಮಣರಿಗೆ ಊಟಕ್ಕೆ ಹಾಕಿ ತಾಂಬೂಲ ದಕ್ಷಿಣೆಗಳನ್ನು ಕೊಡಬೇಕು. ರಾತ್ರಿ ಎಲ್ಲಾ ನೃತ್ಯ ಗಾನಾದಿಗಳಿಂದ ಹೊತ್ತು ಕಳೆದು ಶ್ರೀ ಸತ್ಯನಾರಾಯಣನನ್ನು ಮನಮುಟ್ಟಿ ಸ್ಮರಿಸುತ್ತಾ ಮನೆಗೆ ಹೋಗಬೇಕು. ಇಂತು ವ್ರತವನ್ನು ಆಚರಿಸಿದರೆ, ಮನುಜನ ಮನೋರಥವು ಸಿದ್ಧಿಸುವುದು. ವಿಶೇಷವಾಗಿ ಈ ವ್ರತವು ಕಲಿಯುಗದಲ್ಲಿ ಬಹು ಬೇಗನೆ ಫಲವನ್ನು ಕೊಡುವಂತಹದಾಗಿದೆ. ಹೀಗೆಂದು ಭಗವಂತನು ನಾರದರಿಗೆ ಹೇಳಿದನು.
ಇದೇ ಶ್ರೀ ಸ್ಕಂದ ಪುರಾಣ ರೇವಾ ಖಂಡದ ಸತ್ಯನಾರಾಯಣ ಕಥಾಯೋ ಪ್ರಥಮಾಧ್ಯಾಯಂ ಸಮಾಪ್ತಿರಸ್ತು.
ಓಂ ಶ್ರೀ ಸತ್ಯನಾರಾಯಣಾಯ ನಮಃ
ಓಂ ಶ್ರೀ ಸತ್ಯನಾರಾಯಣಾಯ ನಮಃ
ಓಂ ಶ್ರೀ ಸತ್ಯನಾರಾಯಣಾಯ ನಮಃ
--- *** ---
No comments:
Post a Comment