ವಿಭಾಗಗಳು

Sunday, March 16, 2014

ಗುರು ಬಸವಣ್ಣನವರ ಆಶ್ವಾಸನೆ

ಲೇಖನ ಮತ್ತು ಸಂಗ್ರಹ : ಶ್ರೀಮತಿ ಭಾರತಿ ಬಳಗುರ್ಗಿ 

‘ನಿಮ್ಮನ್ನು ದೇವನೆಡೆಗೆ ಕರೆದೊಯ್ಯುವುದು ನನ್ನ ಹೊಣೆ’ -ಹೀಗೆ ನುಡಿದವರು ಗುರುಬಸವಣ್ಣನವರು. ಪರಮಾತ್ಮನೆಡೆಗೆ ಕರೆದುಕೊಂಡು ಹೋಗುವುದು ನನ್ನ ಜವಾಬ್ದಾರಿ ಎಂದು ಅವರು ಪೂರ್ಣ ಆಶ್ವಾಸನೆಯನ್ನು ಕೊಡುತ್ತಾರೆ.

ದೇವನನ್ನು ಪಡೆಯಬೇಕೆಂಬ ಹಂಬಲ ಮುಮುಕ್ಷುಗಳಲ್ಲಿರುತ್ತದೆ ನಿಜ! ಅದಕ್ಕಾಗಿ ಅನೇಕ ಜನ ಮುಮುಕ್ಷುಗಳು ಪರಿತಪಿಸುತ್ತಿರುತ್ತಾರೆ. ಅವನನ್ನು ಪಡೆಯುವ ಹಂಬಲದಲ್ಲಿ ನಾನಾ ರೀತಿಯ ಪೂಜೆ ಧ್ಯಾನ ಜಪ ತಪಗಳನ್ನು ಮಾಡುತ್ತಿರುತ್ತಾರೆ. ಕೆಲವರು ದೇವನ ನೆಲೆಕಲೆಗಳನ್ನು ಅರಿಯದೆ ಹಲವಾರು ದೇವತೆಗಳನ್ನು ಪೂಜಿಸುತ್ತಿರುತ್ತಾರೆ, ನೂರಾರು ದೇವಾಲಯಗಳಲ್ಲಿ ಪೂಜೆಯನ್ನು ಸಲ್ಲಿಸುತ್ತಿರುತ್ತಾರೆ. ಮತ್ತೆ ಕೆಲವರು ಬೆಟ್ಟ ಗುಡ್ಡಗಳಲ್ಲಿ ಧ್ಯಾನ ತಪಸ್ಸನ್ನು ಆಚರಿಸುತ್ತಿರುತ್ತಾರೆ. ಆದರೆ ಸಾಧನೆಯಲ್ಲಿ ಪರಿಪೂರ್ಣತೆ ಸಿಗದೆ ಪರಿತಪಿಸುತ್ತಿರುತ್ತಾರೆ.

ದೇವನನ್ನು ಕಾಣಲು ನಾನಾರೀತಿಯ ಮಾರ್ಗಗಳನ್ನು ಅನೇಕ ಧರ್ಮಗಳು, ಪಂಥಗಳು, ಮತಗಳು ಬೋಧಿಸುತ್ತಿವೆ. ಕೆಲವು ಧರ್ಮಗಳಲ್ಲಿ ದೇವನ ಅಸ್ತಿತ್ವವೇ ಇರದು. ‘ ಪ್ರಕೃತಿಯ ಬಂಧನದಿಂದ ಬಿಡುಗಡೆ ’ ಇದು ಆ ಧರ್ಮಗಳ ಗುರಿ. ಕೆಲವು ಧರ್ಮಗಳು ಆಂತರಿಕ ವಿಕಾಸವನ್ನೇ ಹೇಳುವುದಿಲ್ಲ. ಅಲ್ಲಿ ಧರ್ಮ ಸಂಘಟನೆ, ಬಾಹ್ಯ ಸಂಸ್ಕಾರ, ಮತ್ತು ಧಾರ್ಮಿಕ ಆಚರಣೆಗಳಿಗೆ ಒತ್ತುಕೊಡುತ್ತಾರೆ. ಪೂಜೆಯೇ ಇಲ್ಲದ ಧರ್ಮವೂ ಸಹ ಇದ್ದು ಅಲ್ಲಿಯೂ ಸಹ ಧರ್ಮಸಂಘಟನೆ, ಧಾರ್ಮಿಕ ಚಟುವಟಿಕೆಗೆ ಹೆಚ್ಚು ಗಮನವಿದೆಯೇ ಹೊರತು ತನ್ನಂತರಂಗವನ್ನು ಒಳಹೊಕ್ಕು ದೇವನ ಅರಿವನ್ನು ಪಡೆಯುವ ಜ್ಞಾನವಿಲ್ಲ. ಮತ್ತೆ ಕೆಲವು ಧರ್ಮಗಳಲ್ಲಿ ವಿಪರೀತವಾಗಿ ಬಾಹ್ಯವಾದ ಧಾರ್ಮಿಕ ಆಚರಣೆಗಳು ತುಂಬಿಹೋಗಿ ಸಾಧಕರಿಗೆ ಸ್ವತಂತ್ರವಾಗಿ ಆಲೋಚನೆಯನ್ನು ಮಾಡಲು ಸಹ ಅವಕಾಶವಿರದು. ಕೆಲವು ಮತಗಳಲ್ಲಿ ಅತ್ಯಂತ ಕ್ಲಿಷ್ಟವಾದ ತತ್ತ್ವಜ್ಞಾನವಿದ್ದು ಅದನ್ನು ಆಚರಣೆಗೆ ತರುವುದು ಸಾಧಕರಿಗೆ ಕಷ್ಟಸಾಧ್ಯ. ಅಲ್ಲಿ ಕೇವಲ ಪಾಂಡಿತ್ಯ, ವಿಚಾರಶೀಲತೆಯನ್ನು ಬೆಳಸಿಕೊಳ್ಳಲು ಹೆಚ್ಚಿನ ಆಸಕ್ತಿಯನ್ನು ವಹಿಸುತ್ತಾರೆಯೇ ಹೊರತು ಅಳವಡಿಕೆ ಕಷ್ಟ. 

ಇಂತಹ ಸನ್ನಿವೇಶದಲ್ಲಿ ಪರಮಾತ್ಮನ ಹಂಬಲವುಳ್ಳ ಸಾಧಕನಿಗೆ ಗೊಂದಲವಾಗುವುದು ಸಹಜ. ಅವನು ಒಂದರಲ್ಲಿಯೂ ಪರಿಪೂರ್ಣತೆ ಸಿಗದೆ ಹಲವಾರು ಧರ್ಮ, ಮತ, ಪಂಥ, ತತ್ತ್ವಜ್ಞಾನ ಇತ್ಯಾದಿಯಾಗಿ ಅರಸುತ್ತಿರುತ್ತಾನೆ. ಕೆಲವೊಮ್ಮೆ ಆಧ್ಯಯನದಲ್ಲಿ ತೊಡಗಿದರೆ, ದಟ್ಟವಾದ ಕಾಡನ್ನು ಹೊಕ್ಕು ಹೊರಬರಲಾರದೆ ಪರಿತಪಿಸುವಂತಾಗುತ್ತದೆ. ಇಂತಹ ಸಾಧಕರಿಗೆ ಗುರುಬಸವಣ್ಣನವರು ಅಭಯವನ್ನು ಕೊಟ್ಟು ಹೇಳುತ್ತಾರೆ, 

ಹಲವು ಕೊಂಬಿಂಗೆ ಹಾಯಲು ಬೇಡ,
ಬರಿ ಕಾಯಕೆ ಕೈ ನೀಡಲುಬೇಡ,
ಲೋಗರಿಗೆಡೆಗೊಟ್ಟು ಭ್ರಮಿತನಾಗಿರಬೇಡ!
ಆಚಾರವೆಂಬುದು ಹಾವಸೆಗಲ್ಲು,
ಭಾವ ತಪ್ಪಿದ ಬಳಿಕ ಏಗೈದಡಾಗದು.
ಅಂಜದಿರು, ಅಳುಕದಿರು, ಪರದೈವಕ್ಕೆರಗದಿರು:
ಕೂಡಲಸಂಗಯ್ಯನ ಕೈಯಲು ಈಸುವುದೆನ್ನ ಭಾರ! 

ಆಧ್ಯಾತ್ಮಿಕ ಹಂಬಲವುಳ್ಳ ಮುಮುಕ್ಷುಗಳು ದೇವನ ಕಾರುಣ್ಯವನ್ನು ಪಡೆಯಲು ಸರಿಯಾದ ಮಾರ್ಗದರ್ಶನವಿಲ್ಲದೆ ಹೊಯ್ದಾಡುವಾಗ, ೧೨ನೇ ಶತಮಾನದಲ್ಲಿ ಸಾವಿರಾರು ಸಾಧಕರನ್ನು ಸಿದ್ಧಪುರುಷರನ್ನಾಗಿ ಮಾಡಿದ ಮಹಾಗುರು ಬಸವಣ್ಣನವರು ಎಲ್ಲರಿಗೂ ಸಾಧನೆಯ ಮಾರ್ಗವನ್ನು ಬೋಧಿಸಿದರು. ಅದಕ್ಕಾಗಿಯೇ ಅವರು, ‘ಬೇರೆ ಬೇರೆ ಸಾಧನಾ ಮಾರ್ಗ, ಯೋಗ, ಅಧ್ಯಯನಗಳೆಂಬ ಹಲವು ಕೊಂಬೆಗಳಿಗೆ ಹಾಯಬೇಡಿ. ಅವುಗಳಿಂದ ಮಾನಸಿಕ ತೃಪ್ತಿಯೆಂಬ ಕಾಯಿ ಸಿಗಬಹುದೇ ವಿನಹಾ ನಿಷ್ಪತ್ತಿಯೆಂಬ ಪರಿಪೂರ್ಣ ಹಣ್ಣು ಸಿಗದು. ಧಾರ್ಮಿಕತೆಯ ಸೋಗಿನಲ್ಲಿ ಹೊಟ್ಟೆಹೊರೆಯುವುದು, ಆಸ್ತಿ ಬೆಳೆಸುವುದು, ಕೀರ್ತಿ ಅಂತಸ್ತಿಗೆ ಹಂಬಲಿಸುವುದು ಇತ್ಯಾದಿಗಳಿಗೆ ಎಡೆಗೊಡಬೇಡಿ. ದೇವನ ನೆಲೆಕಲೆಗಳನ್ನು ಅರ್ಥಮಾಡಿಕೊಳ್ಳದ, ಶರಣ ಮಾರ್ಗದಲ್ಲಿರದ ಲೌಕಿಕ ವ್ಯಕ್ತಿಗಳ ವಿಚಾರಕ್ಕೆ, ಅವರುಗಳ ತರ್ಕಕ್ಕೆ ತಲೆದೂಗಿ ಭ್ರಮೆಗೊಳಗಾಗದಿರಿ’ ಎಂದು ಎಚ್ಚರಿಸುತ್ತಾರೆ.

ಪರಮಾತ್ಮನನ್ನು ಕಾಣಲು ಕೇವಲ ಭಕ್ತಿ-ಜ್ಞಾನವಿದ್ದರಷ್ಟೇ ಸಾಲದು. ಆಚಾರವು ಬಹಳ ಮುಖ್ಯ. ಜೀವನದಲ್ಲಿ ವ್ಯಕ್ತಿಯ ನಡೆ ಶುದ್ಧವಾಗಿದ್ದರೆ ಅದು ಸಾಧನಾ ಮಾರ್ಗದ ಸೋಪಾನವಿದ್ದಂತೆ. ಆಚಾರವು ತಪ್ಪಿದಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲ. ‘ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದಡೆ ಹಿಡಿದಿರ್ದ ಲಿಂಗವು ಘಟಸರ್ಪನಯ್ಯಾ. ನುಡಿಯಲು ಬಾರದು, ನಡೆಯಲು ಬಾರದು, ಲಿಂಗದೇವನೆ ದಿಬ್ಯವೊ ಅಯ್ಯಾ. ಬಡವನ ಕೋಪ ಅವುಡಿಗೆ ಮೃತ್ಯುವಾದಂತೆ ಕಡೆದಾಂಟದು ಕಾಣಾ, ಕೂಡಲಸಂಗಮದೇವಾ’ ಎನ್ನುವಂತೆ, ಪರಮಾತ್ಮನನ್ನು ಹಂಬಲಿಸುವವರು ಮೊದಲು ಸದಾಚಾರವನ್ನು ಅಳವಡಿಸಿಕೊಳ್ಳಬೇಕು ಎಂದು ಸಾಧನೆಯ ಮೊದಲ ಹಂತವನ್ನು ಗುರುಬಸವಣ್ಣನವರು ಬೋಧಿಸುತ್ತಾರೆ. ಅವರು ಹೇಳುತ್ತಾರೆ, ಆಚಾರವೆಂಬುದು ಹಾವಸೆಗಲ್ಲಿದ್ದಂತೆ , ಪಾಚಿಕಟ್ಟಿದ ಕಲ್ಲಿನ ಮೇಲೆ ನಡೆಯಬೇಕಾದರೆ ಅತಿ ಎಚ್ಚರ ಅವಶ್ಯಕ.

ಆಚಾರದಲ್ಲಿ ತಪ್ಪಿ ಜಾರಿ ಬಿದ್ದಲ್ಲಿ ಅಧೋಗತಿಗೆ ಹೋಗುವುದು ಖಂಡಿತ. ಆಚಾರದಲ್ಲಿ ಲೋಪವಾಗಿ, ಭಕ್ತಿ-ಜ್ಞಾನವಿದ್ದರೂ ದೇವನು ಒಲಿಯನು ಎಂಬುದನ್ನು ಅವರು ಸ್ಪಷ್ಟವಾಗಿ ಹೇಳುತ್ತಾರೆ. 

ಸಾಧಕನಿಗೆ ಪರಮಾತ್ಮನನ್ನು ಒಲಿಸಲು ಕಷ್ಟವಾಗಿರುವುದಕ್ಕೆ ಮುಖ್ಯ ಕಾರಣವೆಂದರೆ ಅವನು ದೇವನ ಸ್ವರೂಪವನ್ನು ಅರ್ಥಮಾಡಿಕೊಳ್ಳದಿರುವುದು. ಇರುವ ಒಬ್ಬನೇ ದೇವನನ್ನು ಪೂಜಿಸಿ, ಧ್ಯಾನಿಸದೆ, ಹಲವಾರು ಪುರಾಣಗಳನ್ನು ಓದಿ ನೂರಾರು ದೇವತೆಗಳನ್ನು ದೇವರೆಂದು ಭಾವಿಸಿ ಗೊಂದಲಮಾಡಿಕೊಂಡಿದ್ದಾನೆ. ಹಣಕ್ಕಾಗಿ ಒಬ್ಬರು, ಜ್ಞಾನಕ್ಕಾಗಿ ಒಬ್ಬರು, ಸಮಸ್ಯೆಗಳು ಬಂದಾಗ ಒಬ್ಬರು ಹೀಗೆ ಅನೇಕ ಕಾಲ್ಪನಿಕ ದೇವತೆಗಳನ್ನು ಪೂಜಿಸುತ್ತ ಅಜ್ಞಾನದಲ್ಲಿ ಮುಳುಗಿದ್ದಾನೆ.

ಗುರುಬಸವಣ್ಣನವರು ಹೇಳುತ್ತಾರೆ, ಪರಮಾತ್ಮನು ಒಬ್ಬನೇ. ಅವನೇ ಬ್ರಹ್ಮಾಂಡದ ಸೃಷ್ಟಿಕರ್ತ, ಅವನೇ ಸಕಲ ಜೀವರಾಶಿಯ ಕರ್ತ. ಜಗತ್ತನ್ನು ನಿಯಂತ್ರಿಸುವವನೂ ಅವನೇ, ಎಲ್ಲ ಹುಟ್ಟು ಸಾವುಗಳಿಗೆ ಕಾರಣೀಭೂತನಾಗಿರುವವನೂ ಅವನೇ. ಪ್ರತಿ ಜೀವರಾಶಿಯ ಕರ್ಮ ಫಲಗಳನ್ನು ನೀಡುವವನೂ ಅವನೇ, ಕರ್ಮಾಧ್ಯಕ್ಷನೂ ಅವನೇ. ಸಕಲ ಜೀವರಾಶಿಯ ದುಃಖವನ್ನು ಪರಿಹರಿಸುವವನೂ ಅವನೇ. ಇದನ್ನು ಅರಿತು ದೃಢವಾದ ನಂಬಿಕೆಯಿಂದ ಅವನನ್ನು ಪೂಜಿಸು. ಅವನು ಸರ್ವರನ್ನೂ ರಕ್ಷಿಸುತ್ತಾನೆ ಎಂಬ ನಂಬಿಕೆಯನ್ನು ಆಳವಾಗಿ ಬೇರೂರಿಸಿಕೋ. ನಿನ್ನ ಭಕ್ತಿಯನ್ನು ಆ ಒಬ್ಬನೇ ಪರಮಾತ್ಮನಲ್ಲಿ ಕೇಂದ್ರೀಕರಿಸಿ ಪೂಜೆ ಧ್ಯಾನಾದಿಗಳನ್ನು ಮಾಡು. ಬೇರೆ ದೇವತೆಗಳ ಪೂಜೆಯನ್ನು ಬಿಡುವಲ್ಲಿ ಭಯ ಪಡದಿರು. ನಿನ್ನಲ್ಲಿ ಭಕ್ತಿ-ಜ್ಞಾನವನ್ನು ಪೋಷಿಸಿಕೊಂಡು, ಏಕದೇವನಿಷ್ಠನಾಗಿ ಆಚಾರವನ್ನು ಶುದ್ಧಗೊಳಿಸಿಕೊಂಡೆಯಾದರೆ ಪರಮಾತ್ಮನಲ್ಲಿಗೆ ನಿನ್ನನ್ನು ಸೇರಿಸುವ ಜವಾಬ್ದಾರಿ ನನ್ನದು ಎಂದು ಅಭಯವನ್ನು, ಆಶ್ವಾಸನೆಯನ್ನು ಗುರುಬಸವಣ್ಣನವರು ಈ ವಚನದ ಮೂಲಕ ಕೊಡುತ್ತಿದ್ದಾರೆ. ಆದ್ದರಿಂದ ಗುರುಬಸವಣ್ಣನವರಲ್ಲಿ ಪೂರ್ಣ ನಂಬಿಕೆಯನ್ನಿಟ್ಟು, ಅವರು ತೋರಿದ ಸಾಧನಾ ಪಥದಲ್ಲಿ ಸಾಗಿದರೆ ಅವರೇ ನಮ್ಮನ್ನು ಪರಮಾತ್ಮನಲ್ಲಿಗೆ ಕರೆದೊಯ್ಯುವುದರಿಂದ ಅವರಲ್ಲಿ ಸಂಪೂರ್ಣ ಶರಣಾಗತಿಯನ್ನು ಹೊಂದೋಣ. 

No comments:

Post a Comment