ವಿಭಾಗಗಳು

Sunday, March 30, 2014

ಸಾಮಾಜಿಕ ಐಕ್ಯತೆ ಮತ್ತು ಭಕ್ತಿಭಾವದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ - 2014


ವರದಿ : ಪಿ.ಎಸ್.ರಂಗನಾಥಮಸ್ಕತ್ 
ಓಂಕಾರ ಸಮಿತಿಯು ಮಸ್ಕತ್ ಕನ್ನಡಿಗರ ಮತ್ತು ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ೧೪ ಮಾರ್ಚ್ ೨೦೧೪ (ಫಾಲ್ಗುಣ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಆಶ್ಲೇಷ ನಕ್ಷತ್ರ, ಮೀನ ಸಂಕ್ರಮಣ) ಶುಭ ಘಳಿಗೆಯಂದು ಶ್ರೀ ಕೃಷ್ಣ ಸಭಾಂಗಣದಲ್ಲಿ ಆಯೋಜಿಸಿದ್ದರು. 

ಪೂಜೆಯನ್ನು ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಶ್ರೀಮತಿ ಗಾಯತ್ರಿ ಮತ್ತು ಶ್ರೀ ರಘುರಾಮಚಂದ್ರ ದಂಪತಿಗಳು ವೇದಿಕೆಯ ಮೇಲೆ ಪೂಜಾವಿಧಾನಗಳನ್ನು ನೆರವೇರಿಸಿದರು. ಸಭಾಂಗಣದಲ್ಲಿ ಓಂಕಾರ ಸಮಿತಿಯು ಐವತ್ತಾರು ಪರಿವಾರದವರು ಕುಳಿತು ಶ್ರೀ ಸತ್ಯನಾರಾಯಣ ಪೂಜೆ ಮಾಡುವ ವ್ಯವಸ್ಥೆಯನ್ನು ಮಾಡಿಕೊಟ್ಟಿತ್ತು.

ಬೆಳಿಗ್ಗೆ ೯:೦೦ ಘಂಟೆಗೆ ಪೂಜೆಯು ಆರಂಭಗೊಂಡು ಪ್ರಾಥನೆ, ಸಂಕಲ್ಪ, ಅಭಿಷೇಕ, ಸತ್ಯನಾರಾಯಣ ಕಥಾ, ಭಜನೆ, ಮಂಗಳಾರತಿಯೊಂದಿಗೆ ಮಧ್ಯಾಹ್ನ ೧:೦೦ ಘಂಟೆಗೆ ಸಂಪನ್ನಗೊಂಡಿತು. ದೇವಸ್ಥಾನದ ಆವರಣದಲ್ಲಿ ಬಂದತಹ ಎಲ್ಲ ಸದ್ಭಕ್ತರಿಗೂ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಮೊದಲು ಗುರು ಗಣಪತಿ ಪ್ರತಿಷ್ಟಾಪನೆ, ನಂತರ ಶುದ್ದೀಕರಣ ಮಾಡಿ, ನವಗ್ರಹ ದೇವತೆಗಳಿಂದ ಹಿಡಿದು ಎಲ್ಲ ದೇವತೆಗಳನ್ನು ಕಳಶಕ್ಕೆ ಆವಾಹನೆ ಮಾಡಿದರು, 

ಪಂಚಾಮೃತ ಅಭಿಷೇಕ, ಹಾಲು, ಮೊಸರು ತುಪ್ಪ, ಬಾಳೆಹಣ್ಣು, ಜೇನುತುಪ್ಪ, ಸಕ್ಕರೆ ಮತ್ತು ಎಳೆನೀರಿ ನಿಂದ ತಯಾರಿಸಿದ ಪಂಚಾಮೃತವನ್ನು ಅಭಿಷೇಕಕ್ಕೆ ಉಪಯೋಗಿಸಲಾಯಿತು. 

ಶುದ್ದೋದಕ ಅಭಿಷೇಕ ನಂತರ ಪಂಚ ಕರ್ಫುರ, ಕುಂಕುಮ ಕೇಸರಿ, ಗಂಧ, ನೀರಿನ ಮಿಶ್ರಣದ ಗಂಧೋದಕ ಅಭಿಷೇಕ, ಮಾಡಿದರು.

ವಸ್ತ್ರ, ಅರಿಷಿಣ, ಕುಂಕುಮ, ಗಂಧ, ಹೂ ಗಳಿಂದ ಅಲಂಕಾರ ಮಾಡಿ ನಂತರ ಸತ್ಯನಾರಾಯಣ ದೇವರನ್ನು ಆವಾಹನೆ ಮಾಡಲಾಯಿತು. ತದನಂತರ ಲಕ್ಷ್ಮಿಪೂಜೆ ನೆರವೇರಿತು. ಸತ್ಯನಾರಾಯಣ ದೇವರ ೧೦೮ ಸ್ತೋತ್ರ ಗಳಿಂದ ಅರ್ಚನೆ ನಡೆಯಿತು. ತುಳಸಿ, ಮತ್ತು ವಿವಿಧ ಪುಷ್ಪಗಳನ್ನು ಅರ್ಚನೆಗೆ ಉಪಯೋಗಿಸಲಾಯಿತು.

ಸತ್ಯನಾರಾಯಣ ವೃತ ದ ೫ ಕಥೆಗಳನ್ನು ಸವಿಸ್ತಾರವಾಗಿ ಹೇಳಲಾಯಿತು. ಪ್ರತಿ ಕಥೆ ಯನ್ನು ಹೇಳಿದ ನಂತರ ದೇವರಿಗೆ ಫಲ ಸಮರ್ಪಣೆ ಮಾಡಿ, ಆರತಿ ಮಾಡಿದರು. ಐದನೇ ಅಧ್ಯಾಯ ಮುಗಿದ ನಂತರ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ, ಆಮೇಲೆ ಭಜನೆ ಕಾರ್ಯಕ್ರಮ ನಡೆಯಿತು. ತದನಂತರ ಎಲ್ಲ ನೈವೇದ್ಯ ಸಮರ್ಪಣೆ ಮಾಡಿ ಮಹಾ ಮಂಗಳಾರತಿ ನೇರವೇರಿಸಿದರು.

ಎಲ್ಲ ಭಕ್ತರಿಂದ ಪ್ರಾರ್ಥನೆ, ಸುಹಾಸಿನಿ ಪೂಜೆ, ಸುಮಂಗಲಿ ಪೂಜೆ, ಬ್ರಾಹ್ಮಣ ಪೂಜೆ, ನಂತರ ಕೊನೆಯಲ್ಲಿ ಪ್ರಾರ್ಥನೆ ಮಾಡಿ, ನಮಸ್ಕಾರ ಮಾಡಿ ಕೃಷ್ಣಾರ್ಪಣೆ ಬಿಟ್ಟು ವಿಸರ್ಜನೆ ನಡೆಯಿತು.

ದೇವಸ್ಥಾನದಲ್ಲಿ ಅಡಿಗೆ ಭಟ್ಟರಿಂದ ತಯಾರಿಸಿದ ಮಹಾಪ್ರಸಾದವನ್ನು ಸುಮಾರು ಒಂದು ಸಾವಿರ ಭಕ್ತಾದಿಗಳಿಗೂ ವಿತರಿಸಲಾಯಿತು. 

ಸಾಮಾನ್ಯವಾಗಿ ಸಾಮೂಹಿಕ ಪೂಜೆಯಲ್ಲಿ ಒಂದು ದಂಪತಿ ಯನ್ನು ಕೂರಿಸಿ ಪೂಜಾ ಕೈಂಕರ್ಯವನ್ನು ನೆರವೇರಿಸಿವುದು ಸಾಮಾನ್ಯ, ಆದರೆ ಓಂಕಾರ ಸಮಿತಿಯವರು ಸುಮಾರು ೬೦ ಜನರಿಗಾಗಿ ಪೂಜಾಪೀಠವನ್ನು ಸಿದ್ಧಗೊಳಿಸಿದ್ದರು. ಪ್ರತಿಯೊಬ್ಬರು ತಮ್ಮ ಕೈಯಿಂದ ಪೂಜೆ ನೆರೆವೇರಿಸಲು ಅನುವಾಗುವಂತೆ ಪೂಜೆಗಾಗಿ ಸತ್ಯನಾರಾಯಣ ಸ್ವಾಮಿ ವಿಗ್ರಹ, ಕಳಶ, ಫೋಟೊ, ಅರ್ಘ್ಯ ಪಾತ್ರೆ, ಪೂಜಾ ಮಣೆ ಇನ್ನು ಹಲವಾರು ಸಾಮಗ್ರಿಗಳನ್ನು ಪೂಜೆಗೆ ಕುಳಿತ ಸುಮಾರು ೫೬ ಪರಿವಾರದವರಿಗೆ ನೀಡಲಾಗಿತ್ತು.

ಸಭಾಂಗಣ ಹೂವಿನ ಅಲಂಕಾರ ಮತ್ತು ಫೋಟೊ ಗಳಿಂದ ಸತ್ಯನಾರಾಯಣ ಸ್ವಾಮಿ ಪೂಜೆಗೆ ಕಳೆ ಬಂದಿತ್ತು. ಸಭಾಂಗಣದ ಮುಕ್ಕಾಲು ಭಾಗ ಜಾಗ ಪೂಜೆಗೆ ಕುಳಿತುಕೊಳ್ಳುವ ದಂಪತಿಗಳಿಗೆ ಮೀಸಲಾಗಿಸಿತ್ತು. 

ಓಂಕಾರ ಸಮಿತಿಯ ಶಿಸ್ತು ಬದ್ಧ ಮೇಲ್ವಿಚಾರಣೆ ಪ್ರತಿಯೊಂದು ಕಾರ್ಯದಲ್ಲಿ, ಎದ್ದು ಕಾಣುತಿತ್ತು. ಎಲ್ಲ ಭಕ್ತಾದಿಗಳು ಓಂಕಾರ ಸಮಿತಿಯವರನ್ನು ಪ್ರಶಂಸುತ್ತಿರುವುದು ಕಂಡು ಬಂತು. ಮಹಾ ಪ್ರಸಾದಕ್ಕೆ ಬೇಕಾದ ಸಾಮಗ್ರಿಯಿಂದ ಹಿಡಿದು, ಪೂಜಾ ಸಾಮಗ್ರಿ, ಫಲಪುಷ್ಪ, ಸಭಾಂಗಣ ತಯಾರಿ, ಪೂಜಾ ಪೀಠ, ಪೂಜೆಗೆ ಬೇಕಾದ ಪ್ರತಿಯೊಂದು ಚಿಕ್ಕ ವಸ್ತುವಿನಿಂದ ಹಿಡಿದು ಎಲ್ಲವನ್ನು ಹೊಂದಿಸಿಕೊಂಡು ಬಹು ವಿಶಿಷ್ಟ ವಾಗಿ ಸತ್ಯನಾರಾಯಣ ದೇವರ ಪೂಜೆಯನ್ನು ನಡೆಸಿಕೊಟ್ಟರು ಜತೆಗೆ ಅಚ್ಚುಕಟ್ಟಾದ ಪ್ರಸಾದ ವಿತರಣೆ ಮಾಡಿ ಮಸ್ಕತ್ ಕನ್ನಡಿಗರಲ್ಲದೆ, ಎಲ್ಲ ಆಸ್ತಿಕರ ಮನಗೆದ್ದಿದ್ದು ವಿಶೇಷವಾಗಿತ್ತು.

No comments:

Post a Comment