ವಿಭಾಗಗಳು

Wednesday, March 5, 2014

ಪ್ರಾಪಂಚಿಕತೆ ಮತ್ತು ಪಾರಮಾರ್ಥಿಕ:ಒಂದು ಚಿಂತನೆ

ಲೇಖನ ಮತ್ತು ಸಂಗ್ರಹ : ಶ್ರೀಮತಿ ಭಾರತಿ ಬಳಗುರ್ಗಿ 

ಪ್ರಾಪಂಚಿಕ ಮತ್ತು ಪಾರಮಾರ್ಥಗಳು ಈ ಜಗತ್ತಿನಲ್ಲಿ ಸಮ್ಮಿಳನಗೊಂಡಿವೆ. ಪ್ರಾಪಂಚಿಕ ಜೀವನವನ್ನು ನಡೆಸುವ ವ್ಯಕ್ತಿಗಳ ಗುರಿಯೇ ಬೇರೆ. ಪಾರಮಾರ್ಥಿಕ ಜೀವನವನ್ನು ನಡೆಸುವ ವ್ಯಕ್ತಿಗಳ ಗುರಿಯೇ ಬೇರೆ. ಪ್ರಾಪಂಚಿಕರ ಗುರಿಗಳಲ್ಲಿ ಕೆಲವರದು ತಮ್ಮ ಸಂಸಾರಜೀವನಕ್ಕೆ ಸೀಮಿತವಾಗಿದ್ದರೆ ಮತ್ತೆ ಕೆಲವರದು ಸಮಾಜ ಸೇವೆ, ಧಾರ್ಮಿಕತೆ, ಕೀರ್ತಿ, ಹಣ, ಹೊಸ ವಿಚಾರಗಳು, ಸಂಶೋಧನೆ ಇತ್ಯಾದಿಗಳನ್ನೊಳಗೊಂಡಿರುತ್ತದೆ. ಒಟ್ಟಿನಲ್ಲಿ ಗುರಿಯು ಅವರ ಜೀವಿತದ ಅವಧಿಗೆ ಸೀಮಿತವಾಗಿರುತ್ತದೆ. ಆದರೆ ಪಾರಮಾರ್ಥಿಕರಲ್ಲಿನ ಗುರಿಗಳು ತಮ್ಮ ಜೀವಿತದ ಅವಧಿಯನ್ನು ಮೀರಿ ಸಾಧಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತವೆ. 

ಆಧ್ಯಾತ್ಮಿಕ ಜೀವನವನ್ನು ಅಳವಡಿಸಿಕೊಂಡ ಶರಣರು ಪ್ರಾಪಂಚಿಕ ಜೀವನಕ್ಕೆ ತಿಲಾಂಜಲಿಯನ್ನಿತ್ತು ಜೀವನದ ವಾಸ್ತವಿಕ ಸತ್ಯವನ್ನು ಕಂಡುಕೊಂಡರು. ಈ ಜಗತ್ತಿನಲ್ಲಿ ಆಧ್ಯಾತ್ಮವನ್ನು ಬಿಟ್ಟು ಬೇರೆ ಯಾವುದೇ ವಿಚಾರದಲ್ಲಿ ಎಂತಹ ಹಂತವನ್ನು ಮುಟ್ಟಿದರೂ ಅದು ಕೇವಲ ಜೀವಿತಾವಧಿಗೆ ಸೀಮಿತವಾದುದೆಂದು ಅರಿದ ಅವರು, ಅದನ್ನು ಮೀರಿ ಹೋಗುವ ಉಪಾಯವನ್ನು ಕಂಡುಕೊಂಡರು. ಶರಣರು ಪಾರಮಾರ್ಥಿಕಕ್ಕೆ ಹೋಗುವಲ್ಲಿ ಪ್ರಾಪಂಚಿಕ ವ್ಯಕ್ತಿಯು ಸಹಜವಾಗಿ ಎಲ್ಲಿ ಎಡವುತ್ತಾನೋ ಅದನ್ನು ಗ್ರಹಿಸಿಕೊಂಡು ದಾಟಿ ನಡೆದರು. ಪ್ರಾಪಂಚಿಕತೆಯು ಮನುಷ್ಯನಲ್ಲಿ ಬರುವ ರೀತಿಯನ್ನೂ ಹಾಗೂ ಪಾರಮಾರ್ಥವನ್ನು ಪಡೆಯುವ ವಿಧಾನದ ಬಗ್ಗೆ ಅಲ್ಲಮಪ್ರಭುದೇವರು ಹೇಳುತ್ತಾರೆ, 

ಅಜ್ಞಾನವೆಂಬ ತೊಟ್ಟಿಲೊಳಗೆ ಜ್ಞಾನವೆಂಬ ಶಿಶುವ ಮಲಗಿಸಿ
ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ!
ತೊಟ್ಟಿಲು ಮುರಿದು ನೇಣು ಹರಿದು ಜೋಗುಳ ನಿಂದಲ್ಲದೆ
ಗುಹೇಶ್ವರನೆಂಬ ಲಿಂಗವ ಕಾಣಬಾರದು. 

ಪ್ರಾಪಂಚಿಕತೆಯೆಂಬುದು ಕೇವಲ ಹೊರಗಣ ವಿಷಯಗಳಿಂದ ಕೂಡಿದ ಅಜ್ಞಾನದ ತೊಟ್ಟಿಲಾಗಿದೆ. ಲೌಕಿಕ ವ್ಯಕ್ತಿಯು ತನ್ನ ಮನಸ್ಸನ್ನು ಅಂತರ್ಮುಖ ಮಾಡಿಕೊಂಡು ತನ್ನಂತರಾಳದಲ್ಲಿನ ಅದ್ಭುತ ಜ್ಞಾನವನ್ನು ವಿಕಾಸಮಾಡಿಕೊಳ್ಳದೆ ದೇಹ ಮತ್ತು ಇಂದ್ರಿಯಗಳ ಕಡೆಗೆ ಮನಸ್ಸನ್ನು ಸೀಮಿತಗೊಳಿಸಿ ಕೇವಲ ಹೊರಗಣ ವಿಚಾರಗಳನ್ನೇ ಗ್ರಹಿಸಿಕೊಳ್ಳುತ್ತ ಅಜ್ಞಾನದ ತೊಟ್ಟಿಲನ್ನು ಸೃಷ್ಟಿಸಿಕೊಂಡಿದ್ದಾನೆ. ಮನಸ್ಸನ್ನು ಅಂತರ್ಮುಖ ಮಾಡಿಕೊಳ್ಳದೆ ಬಹಿರ್ಮುಖ ಮಾಡಿಕೊಂಡಿದ್ದಾನೆ. ಹೊರಗಿನ ಜ್ಞಾನಕ್ಕೆ ಒತ್ತುಕೊಡುತ್ತಿದ್ದಾನೆ. ಹಿಂದಿನ ವೇದ ಶಾಸ್ತ್ರ ಆಗಮ ಪುರಾಣಗಳಾಗಲಿ, ಇಂದಿನ ವಿಜ್ಞಾನ, ಸಮಾಜ ಶಾಸ್ತ್ರ, ಅರ್ಥಶಾಸ್ತ್ರ, ಧಾರ್ಮಿಕತೆ, ಇತ್ಯಾದಿಗಳನ್ನೊಳಗೊಂಡ ಯಾವುದೇ ವಿಚಾರಗಳಾಗಲೀ ಅವು ಆ ತೊಟ್ಟಿಲಿಗೆ ತೂಗುವ ಹಗ್ಗವಾಗಿವೆ. ಅವುಗಳಿಂದ ಒದಗಿದ ಜ್ಞಾನವನ್ನೇ ಪರಿಪೂರ್ಣಜ್ಞಾನವೆಂದು ತಿಳಿದು ಭ್ರಾಂತಿಗೆ ಒಳಗಾಗಿದ್ದಾನೆ. ಅವನ್ನೇ ಸಂಪೂರ್ಣವಾಗಿ ನೆಚ್ಚಿಕೊಂಡಿರುವ ಕಾರಣ ಅವುಗಳ ಜ್ಞಾನವೇ ಅವನಿಗೆ ಜೋಗುಳವಾಗಿ ಮರೆವೆಯೆಂಬ ಗಾಢವಾದ ನಿದ್ರೆಯಲ್ಲಿ ಮೈಮರೆತ್ತಿದ್ದಾನೆ.

ಇದನ್ನು ಒಂದು ದೃಷ್ಟಾಂತದ ಮೂಲಕ ಅರ್ಥೈಸಬಹುದು. ಒಂದು ಮೃಗಾಲಯದಲ್ಲಿ ಒಂದು ಹುಲಿಯನ್ನು ಸುಮಾರು ಒಂದು ಕಿ.ಮೀಟರ್ ಸುತ್ತಳತೆಯ ಪ್ರದೇಶದಲ್ಲಿ ಎತ್ತರದ ಬೇಲಿಯನ್ನು ಹಾಕಿ ಬಿಡಲಾಗಿತ್ತು. ಸುಮಾರು ಒಂದು ವರ್ಷ ಅದರಲ್ಲೇ ಆ ಹುಲಿಯ ಜೀವನ ಸಾಗಿತ್ತು. ನಂತರ ಅದರ ಸುತ್ತ ಇರುವ ಬೇಲಿಯನ್ನು ತೆಗೆದು ಎರಡು ಕಿ.ಮೀಟರ್‌ಗೆ ವಿಸ್ತರಿಸಲಾಯಿತ್ತು. ವಿಚಿತ್ರವೆಂದರೆ ಆ ಹುಲಿ ಮೊದಲು ಹಾಕಿದ್ದ ಬೇಲಿಯ ಸೀಮೆಯನ್ನು ದಾಟದೆ ಒಂದು ಕಿ.ಮೀಟರ್ ವ್ಯಾಪ್ತಿಯಲ್ಲೇ ಇರುತ್ತಿತ್ತು. ಅದಕ್ಕೆ ಅಷ್ಟೇ ಜಾಗದಲ್ಲಿ ಓಡಾಡುವ ಅಭ್ಯಾಸವಾಗಿಬಿಟ್ಟಿತ್ತು.

ಆ ಹುಲಿಯಂತೆಯೇ ಮನುಷ್ಯನ ಸ್ಥಿತಿಯೂ ಸಹ. ಅವನು ಧಾರ್ಮಿಕ ಗ್ರಂಥ, ವೈಜ್ಞಾನಿಕ ಸಂಶೋಧನೆ, ಎಂಬಿತ್ಯಾದಿಯಾದ ‘ಸೀಮೆ’ಯಲ್ಲೇ ಜ್ಞಾನವನ್ನು ತಿಳಿದು, ಅದೇ ಶ್ರೇಷ್ಠವೆಂಬ ಬೇಲಿಯನ್ನು ಹಾಕಿಕೊಂಡಿದ್ದಾನೆ. ಹೊಸ ವಿಚಾರ ಬಂದರೂ ಅವುಗಳನ್ನೂ ಹಿಂದಿನದಕ್ಕೇ ಹೋಲಿಸಿ ಸೀಮಿತವನ್ನಾಗಿ ಮಾಡಿಕೊಳ್ಳುತ್ತಿದ್ದಾನೆ.

ಅಲ್ಲಮಪ್ರಭುದೇವರು ಹೇಳುತ್ತಾರೆ, ಎಲ್ಲಿಯವರೆಗೆ ವ್ಯಕ್ತಿಯು ದೇಹ ಮತ್ತು ಇಂದ್ರಿಯಗಳಿಗೆ ಮನಸ್ಸನ್ನು ಹರಿಸಿ, ಹೊರಗಿನ ಜ್ಞಾನ-ವಿಜ್ಞಾನಗಳಲ್ಲಿ ಮುಳುಗಿರುವನೋ, ಎಲ್ಲಿಯವರೆಗೆ ಹೊರಗಿನ ವಿಚಾರಗಳೆಂಬ ಅಜ್ಞಾನದ ತೊಟ್ಟಿಲನ್ನು ಸೃಷ್ಟಿಸಿಕೊಳ್ಳುತ್ತಿರುವನೋ, ಅಲ್ಲಿಯವರೆಗೆ ಅವನಲ್ಲಿ ಅಂತರಂಗದ ಸುಜ್ಞಾನ ನೆಲೆಗೊಳ್ಳದು. ಎಲ್ಲಿಯವರೆಗೆ ಹಿಂದಿನ ವೇದ ಶಾಸ್ತ್ರವೆಂಬ ಹಗ್ಗವನ್ನು ಹರಿಯುವುದಿಲ್ಲವೋ, ವಿಚಾರಗಳೆಂಬ ಜೋಗುಳವನ್ನು ಆಲಿಸುವುದನ್ನು ನಿಲ್ಲಿಸಿ ಅಂತರ್ಮುಖನಾಗಿ ತನ್ನಂತರಂಗದಲ್ಲೇ ಇರುವ ಅದ್ಭುತ ಜ್ಞಾನವನ್ನು ಅರಿಯುವುದಿಲ್ಲವೋ, ಅಲ್ಲಿಯವರೆಗೆ ಅವನು ಪರಿಪೂರ್ಣಜ್ಞಾನಿಯಾಗನು!

ಹೊರಗಿನ ವಿಚಾರಗಳು ಮನುಷ್ಯನನ್ನು ಬಹಿರ್ಮುಖನನ್ನಾಗಿ ಮಾಡುತ್ತವೆ. ಹೊರಗಿನ ಜ್ಞಾನವನ್ನು ಪಡೆದಾಕ್ಷಣ ತಾನು ಬಹಳ ತಿಳಿದೆನೆಂದುಕೊಳ್ಳುತ್ತಾನೆ. ಆದರೆ ನೈಜಜ್ಞಾನವು ಅವನಿಂದ ದೂರವೇ ಉಳಿದಿರುತ್ತದೆ. ಹಲವಾರು ಸಲ ಹೊರಗಿನ ಜ್ಞಾನವನ್ನು ಪಡೆಯುವ ಧಾವತಿಯಲ್ಲಿ ಮನಸ್ಸು ಮತ್ತು ಇಂದ್ರಿಯಗಳ ಸೆಳೆತ ಹಾಗೂ ಅಹಂಕಾರದಿಂದ ಲೌಕಿಕತೆಯಲ್ಲೇ ಮುಳುಗಿಹೋಗುತ್ತಾನೆ. ಆದ್ದರಿಂದ ಜ್ಞಾನಿಯಾಗಬೇಕೆಂಬ ಹಂಬಲವಿರುವ ವ್ಯಕ್ತಿಯು ಮೊದಲು ತನ್ನನ್ನು ತಾನು ಅವಲೋಕಿಸಿಕೊಳ್ಳುತ್ತ ಯಾವ ಚಿಂತನೆಗಳು ಅಂತರಂಗದಲ್ಲಿ ಮೂಡುತ್ತಿವೆ, ಯಾವ ಚಿಂತನೆಗಳು ಬಹಿರಂಗದಿಂದ ಬರುತ್ತಿವೆ ಎಂಬುದನ್ನು ಗುರುತಿಸಬೇಕು. ತಾನು ಸುಜ್ಞಾನಿಯಾಗಲು ತನ್ನಲ್ಲೇ ಅದ್ಭುತವಾದ ಜ್ಞಾನವಿದೆಯೆಂಬುದನ್ನು ಮೊದಲು ಮನವರಿಕೆ ಮಾಡಿಕೊಳ್ಳಬೇಕು. ಹೊರಗಿನ ವ್ಯಕ್ತಿಗಳಿಂದಲಾಗಲಿ, ಪುಸ್ತಕಗಳಿಂದಲಾಗಲಿ ಬಂದ ಜ್ಞಾನಕ್ಕಿಂತ ತನ್ನಲ್ಲೇ ಜ್ಞಾನದ ಭಂಡಾರವೇ ಇದೆ ಎಂಬುದನ್ನು ಒಳಹೊಕ್ಕು ನೋಡಬೇಕು. ಯಾವುದೇ ಜ್ಞಾನದ ಮೂಲವು ಅಂತರಂಗದಲ್ಲಿದೆಯೇ ವಿನಹಾ ಬಹಿರಂಗದಲ್ಲಿಲ್ಲ. ಬಹಿರಂಗದಲ್ಲಿ ವಸ್ತುಗಳಿರುತ್ತವೆ. ಆದರೆ ಅದರ ಜ್ಞಾನ ವ್ಯಕ್ತಿಯೊಳಗೇ ಇರುತ್ತದೆ. ವಿಜ್ಞಾನಿಗಳ ಹೊಸ ಆವಿಷ್ಕಾರಗಳು ಅವರಲ್ಲಿ ಹೊರಗಿನಿಂದ ಬರದೆ ಅವರ ಅಂತರಂಗದಿಂದ ಹೊರಹೊಮ್ಮಿರುತ್ತದೆ. ಅದನ್ನೇ ಪ್ರಭುದೇವರು ಹೇಳುತ್ತಾರೆ, ಪ್ರತಿಯೊಬ್ಬ ವ್ಯಕ್ತಿಯಲ್ಲಿ ‘ಜ್ಞಾನವೆಂಬ ಶಿಶು’ ಅಡಗಿದೆ ಎಂದು.

ಆದ್ದರಿಂದಲೇ ಆಧ್ಯಾತ್ಮಿಕ ವ್ಯಕ್ತಿಗಳು ಅನುಭಾವಿಗಳಾಗಿರುತ್ತಾರೆ. ಅವರು ಹೊರಗಿನ ವಿಚಾರಗಳಿಗಿಂತ ಅಂತರಂಗದ ಅವಲೋಕನದಲ್ಲಿ ತೊಡಗಿರುತ್ತಾರೆ. ಅಂತರಂಗದಲ್ಲಿ ತಮ್ಮ ಮೂಲ ಶಕ್ತಿಯನ್ನು ಅರಿಯುವಷ್ಟರ ಮಟ್ಟಿಗೆ ಉನ್ನತ ಸ್ಥಿತಿಗೇರಿರುತ್ತಾರೆ. ೧೨ ನೇ ಶತಮಾನದಲ್ಲಿ ಶರಣರು ಅಂತರಂಗವನ್ನು ಹೊಕ್ಕು ಅತ್ಯಂತ ವಿನೂತನವಾದ, ಇತರರಿಗೆ ಅಸಾಧ್ಯವೆನಿಸಿದ ನಿಗೂಢವಾದ ಆಧ್ಯಾತ್ಮವಿಚಾರಗಳನ್ನು ಹೊರತೆಗೆದು ಜಗತ್ತಿಗೆ ನೀಡಿದರು. ಹೀಗೆ ಅವರು ಅನುಭಾವಿಗಳಾದರು. ಯಾರು ಅನುಭಾವಿಗಳೋ, ಯಾರು ತಮ್ಮ ಅಂತರಂಗದಿಂದ ಜ್ಞಾನವನ್ನು ಪಡೆಯಲು ಸಮರ್ಥರಾಗಿರುತ್ತಾರೋ ಅವರು ಜಗತ್ತಿಗೇ ಮಾರ್ಗದರ್ಶನವನ್ನು ಕೊಡುತ್ತಾರೆ. ಉಳಿದವರು ಅದನ್ನು ಅನುಕರಣೆ ಮಾಡುತ್ತಾರೆ, ಇಲ್ಲವೇ ಅದನ್ನೇ ವರ್ಣರಂಜಿತವಾಗಿ ಹೇಳಿ ಕೇವಲ ಬೋಧಕರೆನಿಸುತ್ತಾರೆ. 

No comments:

Post a Comment